Homeಕರ್ನಾಟಕಸಮಾಜದ ಗೌರವಕ್ಕಾಗಿ ದೇವೇಗೌಡರ ಅಪಮಾನ ಸಹಿಸಿಕೊಂಡಿದ್ದೇನೆ: ಡಿ ಕೆ ಸುರೇಶ್

ಸಮಾಜದ ಗೌರವಕ್ಕಾಗಿ ದೇವೇಗೌಡರ ಅಪಮಾನ ಸಹಿಸಿಕೊಂಡಿದ್ದೇನೆ: ಡಿ ಕೆ ಸುರೇಶ್

ಚನ್ನಪಟ್ಟಣ ಕ್ಷೇತ್ರದಲ್ಲಿ ನೆಂಟರಂತೆ ಬಂದು ಎಲ್ಲ ಅಧಿಕಾರ ಅನುಭವಿಸಿ, ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರು ನೆಂಟರಂತೆ ಹೋಗಲಿ. ನಿಮ್ಮ ಮನೆ ಮಕ್ಕಳಂತೆ ನಾನು, ಸಿ.ಪಿ ಯೋಗೇಶ್ವರ್, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಸರ್ಕಾರದ ಬೆಂಬಲದೊಂದಿಗೆ ನಿಮ್ಮ ಸೇವೆ ಮಾಡುತ್ತೇವೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಮಳೂರಿನಲ್ಲಿ ಸೋಮವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಡಿ.ಕೆ. ಸುರೇಶ್ ಅವರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರವಾಗಿ ಮತಯಾಚಿಸಿದರು.

“ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಜನರ ಕಷ್ಟ ಕೇಳಲು ಒಂದೇ ಒಂದು ದಿನ ಬರಲಿಲ್ಲ. ಜನರ ಕಷ್ಟ ಕೇಳುವುದಿರಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲಿಲ್ಲ. ಅವರು ಸಿಎಂ ಆಗಿದ್ದಾಗ ನಿಮ್ಮ ಕಷ್ಟ ಆಲಿಸಿದ್ದಾರಾ ಎಂದು ಆತ್ಮಸಾಕ್ಷಿಯಿಂದ ಹೇಳಿ ಎಂದು ಆ ಕಾರ್ಯಕರ್ತರಲ್ಲಿ ಕೇಳಲು ಬಯಸುತ್ತೇನೆ. ಅವರ ಬಗ್ಗೆ ನಿಮಗೆ ಇಷ್ಟು ಅಂಧ ಅಭಿಮಾನ ಯಾಕೆ” ಎಂದು ಪ್ರಶ್ನಿಸಿದರು.

ಅಭಿವೃದ್ಧಿ ಬಗ್ಗೆ ಮಾತನಾಡದ ಕುಮಾರಸ್ವಾಮಿ

“ಈ ಉಪಚುನಾವಣೆಗೆ ಬಂದಿರುವ ಕುಮಾರಸ್ವಾಮಿ ಅವರು ಎಲ್ಲಾದರೂ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ಕನಸಲ್ಲೆಲ್ಲಾ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಯೋಗೇಶ್ವರ್, ಸಿದ್ದರಾಮಯ್ಯ ಅವರದ್ದೇ ಕನವರಿಕೆ. ಇವರ ಹೊರತಾಗಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರಾ? ಯೋಗೇಶ್ವರ್ ಈ ತಾಲೂಕಿಗೆ ನೀರು ನೀಡಿದ್ದಾರೆ. ನಾವು ಈ ತಾಲೂಕಿಗೆ ವಿದ್ಯುತ್ ನೀಡಿದ್ದೇವೆ, ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ಮತ ಕೇಳುತ್ತಿದ್ದೇವೆ” ಎಂದರು.

ದೇವೇಗೌಡರೇ ನಿಮ್ಮ ನೈತಿಕತೆ ಎಲ್ಲಿ ಹೋಯಿತು?

“ದೇವೇಗೌಡರೇ ನಾನು ಯಾವ ವಿಚಾರ ಮಾತನಾಡಲಿ, ನನಗೆ ಹೃದಯ ಇದೇಯೇ? ಇಲ್ಲವಲ್ಲ? ಕಣ್ಣೀರು ಹಾಕುವವರಿಗೆ ಹೃದಯ ಇರಬೇಕು ಎಂದಿದ್ದೀರಿ. ನಿಮ್ಮ ಹೃದಯ ಯಾವಾಗ ಕೆಲಸ ಮಾಡಬೇಕಿತ್ತು ಗೊತ್ತಾ? ನಿಮ್ಮನ್ನು ಸಾಕಿ ಸಲುಹಿ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿ ಸ್ಥಾನದವರೆಗೂ ಬೆಳೆಸಿದರಲ್ಲಾ ಅಂತಹ ತಾಯಂದಿರ ಮಾನವನ್ನು ನಿಮ್ಮ ಮೊಮ್ಮಕ್ಕಳು ಹಾರಾಜು ಹಾಕುವಾಗ ಕಣ್ಣೀರು ಹಾಕಬೇಕಿತ್ತು. ನನ್ನ ಮೊಮ್ಮಕ್ಕಳು ತಪ್ಪು ಮಾಡಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕೇಳಬೇಕಿತ್ತು. ಆಗ ನಿಮ್ಮ ಆತ್ಮಗೌರವ ಉಳಿದು, ಘನತೆ ಹೆಚ್ಚುತ್ತಿತ್ತು” ಎಂದು ಕುಟುಕಿದರು.

ಸಮಾಜದ ಗೌರವಕ್ಕಾಗಿ ದೇವೇಗೌಡರ ಅಪಮಾನ ಸಹಿಸಿಕೊಂಡಿದ್ದೇನೆ

“ದೇವೇಗೌಡರು ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಗಳನ್ನೇ ಬಿಡಲಿಲ್ಲ, ಇನ್ನು ಈ ಸಮಾಜದ ಬೇರೆಯವರನ್ನು ಬಿಡುತ್ತಾರಾ. ಜೆಡಿಎಸ್ ಕಾರ್ಯಕರ್ತರೇ ಜಾತಿ ವ್ಯಾಮೋಹಕ್ಕೆ ಹೋಗಬೇಡಿ. ಯೋಗೇಶ್ವರ್ ಕೂಡ ಒಕ್ಕಲಿಗನೇ. ನಾನು ಒಕ್ಕಲಿಗನೇ. ಬಾಲಕೃಷ್ಣ ಅವರೂ ಒಕ್ಕಲಿಗರೇ. ದೇವೇಗೌಡರು, ಕುಮಾರಸ್ವಾಮಿ ಅವರು ನಮ್ಮನ್ನು ಕಳ್ಳರು, ಸುಳ್ಳರು ಎಂದು ಹೇಳುತ್ತಿದ್ದಾರೆ. ನಾವು ಅವರ ಅಪಮಾನವನ್ನು ಸಹಿಸಿಕೊಳ್ಳುತ್ತಿದ್ದೇನೆ. ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಉತ್ತರ ಕೊಡಬಲ್ಲೆ. ಆದರೆ ಈ ಸಮಾಜದ ಗೌರವಕ್ಕಾಗಿ ನನ್ನ ಮಾತನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದೇನೆ” ಎಂದರು.

“ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ನಿಮ್ಮ ಸೇವೆ ಮಾಡಲು ಶಕ್ತಿ ನೀಡಿ. ನಾವೆಲ್ಲರೂ ಈ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿ ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ 500 ಕೋಟಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸ ಆರಂಭಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments