Homeಕರ್ನಾಟಕನಾನು ರಾಜೀನಾಮೆ ಕೊಡಲು ಸಿದ್ಧ, ಅಮಿತ್‌ ಶಾ ಕೊಡುತ್ತಾರಾ: ಸಿದ್ದರಾಮಯ್ಯ ಸವಾಲು

ನಾನು ರಾಜೀನಾಮೆ ಕೊಡಲು ಸಿದ್ಧ, ಅಮಿತ್‌ ಶಾ ಕೊಡುತ್ತಾರಾ: ಸಿದ್ದರಾಮಯ್ಯ ಸವಾಲು

ದೇಶದ ಗೃಹ ಸಚಿವ ಅಮಿತ್‌ ಶಾ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಸತ್ಯದ ತಲೆ ಮೇಲೆ ಒಡೆದಂತೆ ಸುಳ್ಳು ಹೇಳುತ್ತಾರೆ. ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಸುಳ್ಳಾದರೆ ನಾನು ರಾಜೀನಾಮೆ ಕೊಡಲು‌ ಸಿದ್ಧ, ಅದು ಸತ್ಯವಿದ್ದರೆ ಅಮಿತ್ ಶಾ ರಾಜೀನಾಮೆ ಕೊಡುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಮೈಸೂರಿನ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಸಿದ ಅವರು, “ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲಿಂದ ತಂಡವೂ ಬಂದು ಅಧ್ಯಯನ ಮಾಡಿ ವರದಿ ಸಲ್ಲಿಸಿದೆ” ಎಂದರು.

“ಅಕ್ಟೋಬರ್‌ನಲ್ಲೇ ಮೂರು ಮನವಿ ಸಲ್ಲಿಸಿದ್ದೇವೆ. ಅದಾದ ಮೇಲೆ ಕೇಂದ್ರದ ಅಧಿಕಾರಿಗಳ ತಂಡ ಬಂದಿತ್ತು. ಪರಿಶೀಲನೆ ನಡೆಸಿ ವರದಿ ಕೊಟ್ಟಿದೆ. ನಾನು ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಕೊಟ್ಟಿದ್ದೆ. ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದೆ. ಇದಾಗಿ ನಾಲ್ಕು ತಿಂಗಳಾದರೂ ಪರಿಹಾರ ಬಂದಿಲ್ಲ” ಎಂದು ಹೇಳಿದರು.

“ನಾವ್ಯಾಕೆ ಸುಳ್ಳು ಹೇಳೋಣ? ನಾವು ಕೇಂದ್ರಕ್ಕೆ ಮನವಿ ಕೊಟ್ಟಿದ್ದು, ಭೇಟಿ ಆಗಿದ್ದೆಲ್ಲವೂ ಸತ್ಯವಲ್ಲವೇ? ಡಿಸೆಂಬರ್ 23ಕ್ಕೆ ಸಭೆ ಕರೆದಿದ್ದೇನೆ, ಅಂದು ತೀರ್ಮಾನ ಮಾಡುತ್ತೇನೆ ಎಂದಿದ್ರಲ್ಲಾ ಅಮಿತ್‌ ಶಾ ಅವರು ಮಾಡಿದ್ರಾ? ಅನುದಾನ ಕೊಟ್ಟಿದ್ದೀರಾ? ಅದನ್ನೆಲ್ಲ ಸಾಬೀತುಪಡಿಸಲು ಸಿದ್ಧವಿದ್ದೇನೆ” ಎಂದರು.

“ಈಗಾಗಲೇ ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೇ ಕೊಟ್ಟಿದ್ದೇವೆ. ದಾಖಲೆಗಳು ಇಲ್ಲದಿದ್ದರೆ ಕೋರ್ಟ್‌ಗೆ ಹೋಗಲು ಆಗುತ್ತಾ? ಎನ್.ಡಿ.ಆರ್.ಎಫ್. ಅಡಿ ಬರ ಪರಿಹಾರ ಹಣ ಕೊಡಲೇಬೇಕು. ಇದು ಕೇಂದ್ರ ಸರ್ಕಾರದ ಹಣ ಅಲ್ಲ; ನಮ್ಮ ರಾಜ್ಯದ್ದು. ಆ ಹಣವನ್ನು ಈವರೆಗೂ ಕೊಡದ ಬಿಜೆಪಿಯವರಿಗೆ ಮತದಾರರು ಮತ ಹಾಕಬಾರದು” ಎಂದು ಕರೆ ನೀಡಿದರು.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ‌‌.ಲಕ್ಷ್ಮಣ, ಪಕ್ಷದ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments