ಸಂಸದ ಪ್ರಜ್ವಲ್ ರೇವಣ್ಣನನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಅವನ ಪರವಾಗಿಯೂ ಇಲ್ಲ. ಆತನ ತಪ್ಪು ಸಾಬೀತಾದರೆ ಶಿಕ್ಷೆ ಕೊಡಿ. ಆದರೆ, ನಾನು ಧಿಕಾರ ದುರುಪಯೋಗದ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮುಖ್ಯಮಂತ್ರಿಗಳೇ ನಿಮ್ಮ ಅಧಿಕಾರ ಶಾಶ್ವತವಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ಧ ನನ್ನ ಕಾನೂನು ಹೋರಾಟ” ಎಂದರು.
ವಕೀಲ ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೇ ಎಲ್ಲವೂ ತೀರ್ಮಾನವಾಗಿದೆ. ಪೊಲೀಸರ ರಕ್ಷಣೆಯಲ್ಲಿ ಎಂಟು ಜನ ಸೇರಿದಂತೆ ಕಾರ್ತಿಕ್ ಸಹ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ಆಗಿಲ್ಲ” ಎಂದು ಪ್ರಶ್ನಿಸಿದರು.
“ಸರ್ಕಾರದ ಪ್ರಾಯೋಜಕತ್ವದಲ್ಲಿ ಮೇ 30ರಂದು ಹಾಸನದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿದ್ದರೆ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳುಹಿಸುತ್ತಿದ್ದೆ” ಎಂದು ಹರಿಹಾಯ್ದರು.
“ವಿರೋಧಿಗಳಿಗೆ ತೊಂದರೆ ಕೊಡುವುದು, ದ್ವೇಷದ ರಾಜಕಾರಣ ಮಾಡುವುದಷ್ಟೇ ಸರ್ಕಾರದ ಕೆಲಸ ಆಗಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬಳಿ ಇರುವವರೆಲ್ಲ ಭಯೋತ್ಪಾದಕರೇ, ಬಹಳಷ್ಟು ಭಯೋತ್ಪಾದಕರು ಅವರ ಸುತ್ತಮುತ್ತ ಇದ್ದಾರೆ” ಎಂದು ಕಿಡಿಕಾರಿದರು.
“ನನಗೆ ಡಿಕೆ ಶಿವಕುಮಾರ್ ಕಂಡರೆ ಅಸೂಯೆ ಅಂತಾ ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲ ಅಧಿಕಾರವನ್ನು ನಾವು ನೋಡಿಯಾಗಿದೆ. ನಮಗೆ ಅಧಿಕಾರ ಬೇಡ ಅಂದರೂ ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ” ಎಂದರು.
“CD ಮಹಾನುಭಾವ 1980 ರಲ್ಲೇ CD ಫ್ಯಾಕ್ಟರಿ ಓಪನ್ ಮಾಡಿದ್ದ. ವಿಡಿಯೋ ಮಾಡಿರುವುದು ಒಂದು ಭಾಗ. ವಿಡಿಯೋವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ವಾ? ವಿಡಿಯೋ ಮಾಡಿದ್ದಕ್ಕಿಂತ ಅದನ್ನು ಹಂಚಿದ್ದು ಹೆಚ್ಚು ಅಪರಾಧ ಅಲ್ವಾ” ಎಂದು ಪ್ರಶ್ನಿಸಿದರು.
ಮೈತ್ರಿಗೂ ಪೆನ್ಡ್ರೈಗೂ ಸಂಬಂಧ ಇಲ್ಲ. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರಲಿಲ್ಲ ಇನ್ನೂ ಈಗ ಇರುತ್ತಾನಾ? ನಿಜ ಹೇಳಬೇಕು ಅಂದರೆ ಹೆಚ್ ಡಿ ರೇವಣ್ಣ ಕೂಡ ಆತನ ಸಂಪರ್ಕದಲಿಲ್ಲ. ಪೆನ್ಡ್ರೈವ್ ಪ್ರಕರಣದಿಂದ ದೇವೇಗೌಡರ ಕುಟುಂಬಕ್ಕೆ ಸ್ವಲ್ಪ ಡ್ಯಾಮೆಜ್ ಆಗಿದೆ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತ ಇವರು ಸುದ್ದಿ ಹಬ್ಬಿಸಿ ಬಿಡುತ್ತಾರೆ. ಯಾವ ಕರ್ಮ ಗ್ರಹಚಾರ ನಮಗೆ” ಎಂದರು.
“ಪ್ರಜ್ವಲ್ ವಿದೇಶಕ್ಕೆ ಹೋಗುವುದು ಗೊತ್ತಾಗಿದ್ದರೆ ನಾನು ಅವತ್ತೆ ಅವನನ್ನು ತಡೆಯುತ್ತಿದ್ದೆ. ಪ್ರಜ್ವಲ್ ಭಯ ಬಿದ್ದಿರಬಹುದು ಅದಕ್ಕೆ ಭಾರತಕ್ಕೆ ಬರುತ್ತಿಲ್ಲ. ಪ್ರಜ್ವಲ್, ವಕೀಲರ ಸಲಹೆ ಬೇಡ ನೈತಿಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಸ್ಸು ಬಾ. ತಪ್ಪು ಮಾಡಿಲ್ಲ ಅನ್ನುವುದಾರೆ ಎದುರಿಸು. ತಪ್ಪು ಮಾಡಿದ್ದರೆ ಈ ನಾಡಿನ ಕಾನೂನು ಪ್ರಕಾರ ಶಿಕ್ಷೆ ಅನುಭವಿಸು” ಎಂದು ಹೇಳಿದರು.