ಕಾರಟಗಿ: ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯಲ್ಲಿ ಹಣದ ಲೂಟಿಯೇ ನಡೆಯುತ್ತಿದೆ. ಕಾಮಗಾರಿಯಲ್ಲಿ ನಾನು ಸೇರಿ ಅನೇಕ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಅವರು ತಮ್ಮ ಭ್ರಷ್ಟಾಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡು ಹೇಳಿಕೆ ನೀಡಿದ್ದಾರೆ.
ಕಾರಟಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ನಾನು ಭಾಗಿಯಾಗಿದ್ದೇನೆ” ಎಂದಿದ್ದಾರೆ.
“ಜೆಜೆಎಂ ಕಾಮಗಾರಿಯಲ್ಲಿ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ. ಜೆಜೆಎಂ ಯೋಜನೆಯ ಕಾಮಗಾರಿಯಲ್ಲಿ ರಿವೈಸ್ ಎಸ್ಟಿಮೇಟ್ನಿಂದ ಹೊಸ ಡಿಪಿಆರ್ ಮಾಡಿಸುವವರೆಗೂ ಹಣ ಲೂಟಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 123 ಕೋಟಿ ರೂ. ಯೋಜನೆಗೆ ಮತ್ತೆ 6 ತಿಂಗಳಲ್ಲಿ 123 ಕೋಟಿ ರೂ. ಪುನಃ ಅನುದಾನ ಕೇಳಲಾಗಿದೆ. ಅಕ್ರಮದಲ್ಲಿ ಸಂಸದರಿಂದ ಹಿಡಿದು ಎಲ್ಲರೂ ಹಣ ದೋಚಿದ್ದಾರೆ. ಇದರಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ” ಎಂದರು.
“ನಾವೇನೂ ಹರಿಶ್ಚಂದ್ರರಲ್ಲ, ನ್ಯಾಯ ಅನ್ಯಾಯವನ್ನು ನೋಡಬೇಕು. ಅನ್ಯಾಯದಿಂದ ಹಣ ಗಳಿಸಿದವರು ನೆಮ್ಮದಿಯಿಂದ ನಿದ್ದೆ ಮಾಡಲ್ಲ. ದುಡಿದು ತಿನ್ನೋರು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ. ನಾನು ಮಾಡಿದ ತಪ್ಪಿನ ಅರಿವು ನನಗಿದೆ” ಎಂದು ಹೇಳಿಕೊಂಡಿದ್ದಾರೆ.