Homeಕರ್ನಾಟಕನ್ಯಾಯಾಲಯದಲ್ಲಿ ನಾನು ಆರೋಪ ಮುಕ್ತ, ಸಿದ್ದರಾಮಯ್ಯ ಇನ್ನೂ ಆಗಿಲ್ಲ: ಆರ್‌ ಅಶೋಕ್

ನ್ಯಾಯಾಲಯದಲ್ಲಿ ನಾನು ಆರೋಪ ಮುಕ್ತ, ಸಿದ್ದರಾಮಯ್ಯ ಇನ್ನೂ ಆಗಿಲ್ಲ: ಆರ್‌ ಅಶೋಕ್

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣ ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತೀರ್ಪು ಬಂದ ಬಳಿಕ ಮುಖ್ಯಮಂತ್ರಿಯವರು ಭಯಗೊಂಡು ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಾನು ಕೋರ್ಟ್‌ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದರು.

ತಮ್ಮ ಮೇಲಿನ ಆರೋಪ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ ಅವರು, “ಕೋರ್ಟ್‌ನಲ್ಲಿ ನಾನು ಆಪಾದಿತ ಎಂದು ಹೇಳಿರಲಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನನ್ನನ್ನು ಆರೋಪ ಮುಕ್ತ ಮಾಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತರಾಗಿಲ್ಲ. ಈ ದೇಶದಲ್ಲಿ ಕೋರ್ಟ್‌ ದೊಡ್ಡದೋ, ಕಾಂಗ್ರೆಸ್‌ ದೊಡ್ಡದೋ” ಎಂದು ಪ್ರಶ್ನೆ ಮಾಡಿದರು.

“ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್‌ನ ನಾಲ್ಕು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಆದರೆ ಇದೇ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ಅಂದು ನೇಮಿಸಿದ್ದ ರಾಜ್ಯಪಾಲರು ಮತ್ತು ಘನ ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟಿದೆ” ಎಂದು ಹೇಳಿದರು.

“ಕಾಂಗ್ರೆಸ್‌ ಸರ್ಕಾರದ ನಾಲ್ವರು ಸಚಿವರು ನನ್ನ ಬಗ್ಗೆ ಕಳಂಕ ಸೃಷ್ಟಿಸಲು ಹಳೆಯ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ” ಎಂದರು.

“ಸಚಿವರಾದ ಕೃಷ್ಣ ಭೈರೇಗೌಡರ ಕೋಲಾರದ ಆಸ್ತಿಗಳೆಲ್ಲವೂ ಕುಟುಂಬದಿಂದ ಅವರಿಗೆ ಬಂದಿದೆ. ಅದೇ ರೀತಿ ಮುನಿವೆಂಕಟಪ್ಪ ಅವರು ವಿಲ್‌ ತಯಾರಿಸಿ ಅವರ ಮಕ್ಕಳಿಗೆ ಆಸ್ತಿ ಕೊಟ್ಟಿದ್ದಾರೆ. ಆ ಕುಟುಂಬದಲ್ಲಿ ಸುಮಾರು 20 ಜನರಿದ್ದು, ನನ್ನ ಹೆಸರಿಗೆ ನೋಂದಣಿಯಾದಾಗ ಆ 20 ಜನರು ಕೂಡ ಸಹಿ ಹಾಕಿದ್ದಾರೆ. ಇದು ಹೇಗೆ ಬೇನಾಮಿಯಾಗುತ್ತದೆ” ಎಂದು ಪ್ರಶ್ನಿಸಿದರು.

“1995 ರಲ್ಲಿ ಆಗಿರುವ ಪಹಣಿಯಲ್ಲಿ ಇಡೀ ಕುಟುಂಬದವರ ಹೆಸರಿದೆ. ಆದರೆ ಇದು ಬಿಡಿಎ ಭೂಮಿ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಇದನ್ನು ಬಿ.ಎಸ್‌.ಯಡಿಯೂರಪ್ಪ ಅಕ್ರಮವಾಗಿ ಡಿ ನೋಟಿಫೈ ಮಾಡಿದ್ದಾರೆ ಎಂದು ಕೂಡ ಸುಳ್ಳು ಆರೋಪ ಮಾಡಿದ್ದಾರೆ. ಸುಮಾರು 1 ಎಕರೆ ವ್ಯಾಪ್ತಿಯ ಈ ಜಾಗ, ಹೊರವರ್ತುಲ ರಸ್ತೆಯ ಪಕ್ಕವಿದೆ. ರಸ್ತೆಗೆ ಅಗತ್ಯವಿರುವ ಭೂಮಿ ಪಡೆದು, ಉಳಿದಿದ್ದನ್ನು ಡಿನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂದೇ ಅಂದು ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಹೇಳಿದ್ದರು. ಈ ಭೂಮಿ 70:30 ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ 70% ಸರ್ಕಾರಕ್ಕೆ ಹಾಗೂ 30% ಮಾಲೀಕರಿಗೆ ನೀಡಲಾಗಿದೆ. ಅಂದರೆ ಬಿಡಿಎಗೆ ಹೆಚ್ಚು ಲಾಭವಾಗಿದೆ” ಎಂದರು.

“ಬಿಡಿಎದಿಂದಲೇ ಭೂ ಮಾಲೀಕರಿಗೆ ಪತ್ರ ಬರೆದಿದ್ದು, ಅದರಂತೆ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ನನ್ನ ವಿರುದ್ಧ ತನಿಖೆ ನಡೆಸಲು ಅನುಮತಿ ಕೊಡುವಂತೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರಧ್ವಾಜ್‌ ಅವರನ್ನು ಕೋರಲಾಗಿತ್ತು. ಆದರೆ ರಾಜ್ಯಪಾಲರು ಕೂಡ ನನ್ನ ವಿರುದ್ಧ ತನಿಖೆಗೆ ಅವಕಾಶ ನೀಡಲಿಲ್ಲ. ಆದರೂ ನನ್ನನ್ನು ಕಾಂಗ್ರೆಸ್‌ ಸಚಿವರು ಭೂ ಕಬಳಿಕೆದಾರ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನ ರಾಜ್ಯಪಾಲರಾಗಲೀ, ನ್ಯಾಯಾಲಯವಾಗಲೀ ನನ್ನನ್ನು ತಪ್ಪಿತಸ್ಥ ಎಂದು ಭಾವಿಸಿಲ್ಲ. ಆದರೆ ಈಗ ಸಿದ್ದರಾಮಯ್ಯನವರಿಗೆ ನನ್ನನ್ನು ಹೋಲಿಸಲಾಗುತ್ತಿದೆ” ಎಂದು ಕಿಡಿಕಾರಿದರು.

“ಕಂದಾಯ ಸಚಿವ ಕೃಷ್ಣ ಬೈರೇಗೌಡರ ಬಳಿ ಅಧಿಕಾರವಿದೆ. ಎಚ್‌.ಕೆ.ಪಾಟೀಲ್‌ ಹಾಗೂ ಡಾ.ಜಿ.ಪರಮೇಶ್ವರ್‌ ಹಿರಿಯರು. ಸತೀಶ್‌ ಜಾರಕಿಹೊಳಿ ಮಾತ್ರ ಈ ಬಗ್ಗೆ ಮಾತಾಡಿಲ್ಲ. ಏಕೆಂದರೆ ಇದು ಬುರುಡೆ ಕೇಸ್‌ ಎಂದು ಅವರಿಗೂ ಗೊತ್ತಿತ್ತು. ಈ ನಾಲ್ಕು ಸಚಿವರು ನನಗೆ ಆದರ್ಶವಾಗಿದ್ದಾರೆ. ನಾನು ಯಾವುದೇ ಸಚಿವರಿಗೆ ಸವಾಲು ಹಾಕುತ್ತಿಲ್ಲ. ನನಗೆ ಯಾವುದೇ ಆಯ್ಕೆ ಇಲ್ಲ. ಈ ನಾಲ್ಕು ಸಚಿವರು ನೈತಿಕತೆಯ ಆಧಾರದಲ್ಲಿ ಏನು ಹೇಳುತ್ತಾರೋ, ಅದನ್ನೇ ಪಾಲನೆ ಮಾಡುತ್ತೇನೆ” ವ್ಯಂಗ್ಯವಾಗಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments