ರಾಜಧಾನಿ ಮಹಾನಗರಿ ಬೆಂಗಳೂರಿನಲ್ಲಿ ಅತ್ಯಂತ ವಿಲಕ್ಷಣ ಹಾಗೂ ವಿಕೃತ ರೀತಿಯ ಹತ್ಯೆಗಳು ನಡೆಯುತ್ತಿವೆ. ಮಹಿಳೆಯನ್ನು ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟ ಘಟನೆ ಮಾಸುವ ಮುನ್ನವೇ, ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಟ್ಟು ಪತಿ ಪರಾರಿಯಾಗಿದ್ದಾನೆ.
ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿರುವ ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಹುಳಿಮಾವು ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ರಾಕೇಶ್ ರಾಜೇಂದ್ರ ಖೆಡೇಕರ್ (36)ನನ್ನು ಬಂಧಿಸಿದ್ದಾರೆ.
ಕೊಲೆಯಾದ ವರನ್ನು ಈತನ ಪತ್ನಿ ಮಹಾರಾಷ್ಟ್ರದ ಗೌರಿ ಅನಿಲ್ ಸಾಂಬೆಕರ್ (32) ಎಂದು ಗುರುತಿಸಲಾಗಿದೆ.
ಕೊಲೆಯಾದ ಗೌರಿ ಅನಿಲ್ ಸಾಂಬೇಕರ್ ಮಾಸ್ ಕಮ್ಯುನಿಕೇಷನ್‌ನಲ್ಲಿ ಪದವಿ ಮುಗಿಸಿದ್ದು, ಎರಡು ವರ್ಷದ ಹಿಂದೆ ರಾಕೇಶ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ರಾಕೇಶ್ ಮನೆಯಲ್ಲೇ (ವರ್ಕ್ ಫ್ರಂ ಹೋಮ್) ಕೆಲಸ ನಿರ್ವಹಿಸುತ್ತಿದ್ದ,ಇಬ್ಬರೂ ಕೂಡ ಮಹಾರಾಷ್ಟ್ರ ಮೂಲದವರು. ಕಳೆದ ಒಂದು ತಿಂಗಳ ಹಿಂದೆ ಹುಳಿಮಾವುವಿನ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆಗೆ ಬಂದಿದ್ದರು.
ಕಳೆದ ಮಾ.25ರಂದು ಪತ್ನಿ ಗೌರಿಯನ್ನು ಕೊಲೆಗೈದು. ಬಳಿಕ ಮೃತದೇಹವನ್ನು ಟ್ರ್ಯಾಲಿ ಸೂಟ್‌ಕೇಸ್ ನಲ್ಲಿಟ್ಟು ಸಾಗಿಸಲು ಪ್ರಯತ್ನಿಸಿದ್ದಾನೆ. ಆದರೆ ಇದು ಸಾಧ್ಯವಾಗದೇ ಸೂಟ್‌ಕೇಸನ್ನು ಶೌಚಾಲಯದಲ್ಲಿ ಇರಿಸಿ, ಮನೆಯ ಬಾಗಿಲುಹಾಕಿಕೊಂಡು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ.
ನಿನ್ನೆ ಸಂಜೆ 5.30ಕ್ಕೆ ಮನೆ ಮಾಲೀಕರಿಗೆ ಕರೆ ಮಾಡಿರುವ ರಾಕೇಶ್, ವೈಯಕ್ತಿಕ ಕಾರಣಕ್ಕೆ ಪತ್ನಿ ಗೌರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ರಾಕೇಶ್ ಕರೆ ಬೆನ್ನಲ್ಲೇ ಮನೆ ಮಾಲೀಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಮನೆಯ ಶೌಚಾಲಯದಲ್ಲಿದ್ದ ಸೂಟ್ ಕೇಸ್‌ನಲ್ಲಿ ಗೌರಿ ಅವರ ಮೃತದೇಹ ಪತ್ತೆಯಾಗಿದೆ. ಸೀನ್ ಆಫ್ ಕ್ರೈಂ ಅಧಿಕಾರಿಗಳ ತಂಡ ಮತ್ತು ಶ್ವಾನದಳ ಘಟನಾ ಸ್ಥಳವನ್ನು ಪರಿಶೀಲಿಸಿದೆ.
ಕೊಲೆ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹುಳಿಮಾವು ಠಾಣೆ ಪೊಲೀಸರು ಪತಿ ರಾಕೇಶ್ ಬಗ್ಗೆ ಅನುಮಾನಗೊಂಡು ಮೊಬೈಲ್ ಟ್ರ್ಯಾಕ್ ಮಾಡಿದಾಗ ಪುಣೆಯಲ್ಲಿ ಲೋಕೇಷನ್ ತೋರಿಸಿದೆ. ಬಳಿಕ ಪುಣೆ ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ರಾಕೇಶ್ ಬಗ್ಗೆ ತಿಳಿಸಿದ್ದಾರೆ.
ತಕ್ಷಣ ಕಾರ್ಯ ಪ್ರವೃತ್ತರಾದ ಪುಣೆ ಪೊಲೀಸರು ರಾಕೇಶ್‌ನ ಮೊಬೈಲ್ ಕರೆ ವಿವರ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಘಟನೆ ಬೆಳಕಿಗೆ ಬಂದ ಕೆಲವೇ ತಾಸಿನಲ್ಲಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ. ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ತಿಳಿಸಿದ ಆತ ಅವರ ಕೈಗೆ ಸಿಗಬಾರದು ಎಂದು ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಖೇಡೇಕರ್ ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದನು.ಇದನ್ನು ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲಿಸಿ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ನಗರ ಪೊಲೀಸರ ಒಂದು ತಂಡವು ಪುಣೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆತಂದು ವಿಚಾರಣೆ ಕೈಗೊಂಡಿದೆ. ಘಟನೆ ಬಗ್ಗೆ ಗೌರಿ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ. ಪೋಷಕರು ನಗರಕ್ಕೆ ಬಂದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.