ಪತಂಜಲಿ ಸಂಸ್ಥೆಗೆ ಸುಪ್ರೀಂ ಕೋರ್ಟ್ ಔಷಧದ ಗುಣಮಟ್ಟದ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ರಾಜ್ಯದಲ್ಲಿ ಮಾಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ಸಮಸ್ತ ಭಾರತೀಯರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಬೆಳೆಯುತ್ತಿರುವ ಬಾಬಾ ರಾಮದೇವ್ ಅವರ ಪತಂಜಲಿ ಮೇಲೆ ಈಗ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ದಿನೇಶ್ ಗುಂಡೂರಾವ್ ಅವರೇ ಪತಂಜಲಿ ಉತ್ಪನ್ನಗಳ ಮೇಲೆ ನಿಮಗೇಕಿಷ್ಟು ದ್ವೇಷ” ಎಂದು ಪ್ರಶ್ನಿಸಿದ್ದಾರೆ.
“ಈ ಹಲಾಲ್ ಕಟ್ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು, ಬಿಸಿನೆಸ್ ಗಳು ಬೆಳೆದರೆ ಸಹಿಸೋದೇ ಇಲ್ಲ. ಪತಂಜಲಿ ಹಲಾಲ್ ಅಲ್ಲ ಅಂತಲೇ? ಪತಂಜಲಿ ಕೇಸರಿ ಬಟ್ಟೆ ತೊಡುವ ಯೋಗಗುರು ಬಾಬಾ ರಾಮ್ ದೇವ್ ಅವರದ್ದು ಅಂತಲೇ? ಪತಂಜಲಿ ಆತ್ಮನಿರ್ಭರ ಭಾರತದ ಪ್ರತೀಕ ಅಂತಲೇ? ಈ ದ್ವೇಷ ರಾಜಕಾರಣವೇ ಕಾಂಗ್ರೆಸ್ ಪಕ್ಷವನ್ನ ಸುಡಲಿದೆ. ಈ ನಿಮ್ಮ ಹಲಾಲ್ ಮಮಕಾರವೇ ನಿಮ್ಮನ್ನ ನಾಶ ಮಾಡಲಿದೆ” ಎಂದು ಹರಿಹಾಯ್ದಿದ್ದಾರೆ.
ದಿನೇಶ್ ಗುಂಡೂರಾವ್ ಹೇಳಿದ್ದೇನು?
“ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಪತಂಜಲಿ ಸಂಸ್ಥೆ ಜನರಿಗೆ ಪುರಾವೆ ಇಲ್ಲದೆಯೇ ದಾರಿತಪ್ಪಿಸುತ್ತಿದೆ. ರೋಗ ಗುಣಪಡಿಸುವ ಲಕ್ಷಣ ಇಲ್ಲದಿದ್ದರೂ ಆಯುರ್ವೇದ ಎಂದು ಮಾರಾಟ ಮಾಡುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆ ವಿರುದ್ಧ ಗಂಭೀರವಾಗಿ ಮಾತನಾಡಿದೆ. ಹೀಗಾಗಿ ರಾಜ್ಯದಲ್ಲಿ ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಮಾಡಲು ಸೂಚಿಸಲಾಗಿದೆ” ಎಂದು ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಗುರುವಾರ ತಿಳಿಸಿದ್ದರು.
“ಜನರಿಗೆ ದಾರಿ ತಪ್ಪಿಸಿ ಕಂಪನಿಗೆ ಲಾಭ ಮಾಡಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದ್ದರು. ಆಧಾರ ರಹಿತ ಮಾಹಿತಿಗಳನ್ನು ಯಾವುದೇ ಸಂಶೋಧನೆ ಇಲ್ಲದೆಯೇ ಪ್ರಚಾರ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಪತಂಜಲಿ ಉತ್ಪನ್ನಗಳನ್ನು ಪರೀಕ್ಷೆ ನಡೆಸಲು ನಮ್ಮಲ್ಲೂ ಡ್ರಗ್ಸ್ ಕಂಟ್ರೋಲ್ ಹಾಗೂ ಆಯುಷ್ ಇಲಾಖೆಗೆ ಸೂಚನೆ ನೀಡಿದ್ದೇನೆ” ಎಂದಿದ್ದಾರೆ.
“ಬಾಬ ರಾಮದೇವ್‌ಗೆ ಬಿಜೆಪಿಯಿಂದ ಬಹಳ ಬೆಂಬಲ ಸಿಕ್ಕಿದೆ. ಅದು ಬೇರೆ ವಿಚಾರ. ಆದರೆ ಜನರಿಗೆ ಏನೋ ನಂಬಿಕೆ ಮೂಡಿಸಿ ಮೋಸ ಮಾಡುವುದು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಿದರೆ ಅದು ದೊಡ್ಡ ಅಪರಾಧ ಆಗಲಿದೆ” ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಲೆಕ್ಕಕ್ಕಿಲ್ಲವೇ?
ಜಾಹೀರಾತು ವಿಚಾರದಲ್ಲಿ ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿದೆ. ಪತಂಜಲಿ ಸಂಸ್ಥಾಪಕರು ಮಾಡಿದ ಕ್ಷಮಯಾಚನೆಯನ್ನು ಕೋರ್ಟ್ ತಿರಸ್ಕರಿಸುವುದಾಗಿ ಹೇಳಿದೆ. ಕ್ಷಮೆ ಯಾಚನೆ ಸಾಲದು, ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ.
ಸುಪ್ರೀಂ ಕೋರ್ಟ್ ಈ ಬಗ್ಗೆ ಗಂಭೀರವಾಗಿ ಮಾತನಾಡಿರುವಾಗ ಬಿಜೆಪಿಯ ಆರ್ ಅಶೋಕ್ ಅವರು ಪತಂಜಲಿ ಸಂಸ್ಥೆ ಮತ್ತು ಬಾಬಾ ರಾಮ್‌ದೇವ್ ಅವರ ಪರವಾಗಿ ಮಾತನಾಡುತ್ತಿರುವುದು ವಿಪರ್ಯಾಸ. ಆರೋಗ್ಯ ಇಲಾಖೆಯ ಕ್ರಮವನ್ನು ಸ್ವಾಗತಿಸಿ ಮಾತನಾಡಬೇಕಿದ್ದ ಆರ್ ಅಶೋಕ್ ಪರೋಕ್ಷವಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನೇ ಅಗೌರವದಿಂದ ಕಾಣುತ್ತಿದ್ದಾರೆ.