Homeಕರ್ನಾಟಕಮರ್ಯಾದೆಗೇಡು ಹತ್ಯೆ | ವಿಷಮಾನತೆ ಸಮಾಜದ ಮನಸ್ಥಿತಿಯ ಭಾಷೆ: ಕೆವಿ ಪ್ರಭಾಕರ್

ಮರ್ಯಾದೆಗೇಡು ಹತ್ಯೆ | ವಿಷಮಾನತೆ ಸಮಾಜದ ಮನಸ್ಥಿತಿಯ ಭಾಷೆ: ಕೆವಿ ಪ್ರಭಾಕರ್

ಹೆಣ್ಣಿನ ಬಗ್ಗೆ ಬಳಕೆ ಆಗುವ ಭಾಷೆ ಗಂಡಾಳಿಕೆಯ ಮನಸ್ಥಿತಿಯದ್ದೇ ಆಗಿದೆ. ಪ್ರೀತಿ ಮಾತಿನಿಂದ ತುಟಿ ಹೊಲಿಯುವ ಸಂಚು, ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುವ ದ್ವೇಷ ಕೂಡ ಗಂಡಾಳಿಕೆಯ ಭಾಷೆಯೇ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅಭಿಪ್ರಾಯಪಟ್ಟರು.

ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ, “ಭಾಷೆ: ಸಾಧ್ಯತೆ ಮತ್ತು ಸವಾಲುಗಳು” ಕುರಿತ ಗೋಷ್ಠಿಯಲ್ಲಿ ಆಶಯ ಮಾತುಗಳನ್ನು ಆಡಿದರು.

“ನಾನು ಸಾಹಿತಿ ಅಲ್ಲ. ಸಾಹಿತ್ಯದ ಓದುಗ ಅಷ್ಟೆ. ನಾನು ಒಬ್ಬ ಪತ್ರಕರ್ತನಾಗಿ ತಿಳಿದಿದ್ದನ್ನು, ಗ್ರಹಿಸಿದ್ದನ್ನು ಮಾತ್ರ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನನ್ನ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳುವುದಕ್ಕೂ, ತಿದ್ದಿಕೊಳ್ಳುವುದಕ್ಕೂ ಈ ಒಂದು ಗೋಷ್ಠಿ ನನಗೆ ಉಪಯುಕ್ತ ಆಗುತ್ತದೆ ಎಂದು ನಂಬಿಕೊಂಡಿದ್ದೇನೆ” ಎಂದರು.

“ಅಮ್ಮ, ಅಕ್ಕ, ಪತ್ನಿ, ಅಜ್ಜಿ ಪದಗಳಿಲ್ಲದ ಬಯ್ಗುಳಗಳೇ ಇಲ್ಲದ ದ್ವೇಷದ ಭಾಷೆ ಒಂದು ಕಡೆಗಿದೆ. ಹೆಣ್ಣನ್ನು ದೇವತೆ, ಗೋಮಾತೆ ಎಂದು ಕರೆಯುತ್ತಲೇ ಪ್ರೀತಿಯ ಮಾತಿನಿಂದಲೇ ಆಕೆಯ ತುಟಿಗಳನ್ನು ಹೊಲಿಯುವ ಭಾಷೆಯೂ ಮತ್ತೊಂದು ಕಡೆಗಿದೆ. ಈ ಎರಡೂ ಸಂಚನ್ನು ದಾಟುವ ಸವಾಲು ನಮ್ಮ ಮುಂದಿದೆ. ಈ ದಿಕ್ಕಿನಲ್ಲಿ ಗೋಷ್ಠಿ ಬೆಳಕು ಚೆಲ್ಲಬಹುದು ಎಂದು ನಿರೀಕ್ಷಿಸುತ್ತೇನೆ” ಎಂದು ಹೇಳಿದರು.

“ಒಂಬತ್ತು ತಿಂಗಳ ಬಾಹ್ಯಾಕಾಶ ಗರ್ಭದಿಂದ ಭೂಮಿಗೆ ಸೇಫ್‌ ಡೆಲಿವರಿ ಆಗಿರುವ ಸುನಿತಾ ವಿಲಿಯಮ್ಸ್‌ ಒಂದು ಮಾತು ಹೇಳಿದ್ದಾರೆ. ʼನಾವು ಮೇಲಕ್ಕೆ ಮೇಲಕ್ಕೆ ಹೋದಷ್ಟೂ ಮನುಷ್ಯ ನಿರ್ಮಿತ ದೇಶದ ಗಡಿಗಳು ಕಾಣೆ ಆಗುತ್ತವೆ. ಕೆಳಕ್ಕೆ ಇಳಿದಾಗಲಷ್ಟೆ ಈ ಗಡಿಗಳೆಲ್ಲಾ ಕಾಣುತ್ತವೆʼ ಎಂದಿದ್ದಾರೆ. ಒಂದು ಕಡೆ ಬಾಹ್ಯಾಕಾಶದಲ್ಲಿ ಬದುಕು ನಡೆಸಿ ಬಂದ ಸುನಿತಾ ವಿಲಿಯಮ್ಸ್‌ ಇದ್ದರೆ. ಮತ್ತೊಂದು ಕಡೆ ಕುಂಬ ಮೇಳದ ನದಿಯಲ್ಲಿ ಮುಳುಗೆದ್ದ ಸಮಾಜ ಇದೆ. ಇದು ಮಹಿಳಾ ಸಮಾಜದ ಮುಂದೆ ಇರುವ ಸಾಧ್ಯತೆ ಮತ್ತು ಸವಾಲು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ” ಎಂದರು.

“ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ಇತ್ತೀಚಿಗೆ ಮೂರು ರೀತಿಯ ಘಟನೆಗಳು ಪತ್ರಿಕೆಗಳಲ್ಲಿ ಹೆಚ್ಚೆಚ್ಚು ವರದಿ ಆಗುತ್ತಿವೆ. ಅವುಗಳಲ್ಲಿ; ಜಾತಿ ಕಾರಣಕ್ಕೆ ಪೋಷಕರಿಂದಲೇ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳು, ಜಾತಿ-ಧರ್ಮ ಮೀರಿ ಪ್ರೀತಿಯ ಅಂಗಳದಲ್ಲಿ ಒಂದಾದ ಲಿವಿಂಗ್‌ ರಿಲೇಷನ್‌ ಶಿಪ್‌ನಲ್ಲಿ ನಡೆಯುತ್ತಿರುವ ಕೊಲೆಗಳು ಹಾಗೂ ಬಾಲಕಿಯರಿಂದ-ವೃದ್ದೆಯರ ಮೇಲೂ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳು” ಎಂದು ವಿವರಿಸಿದರು.

“ಮರ್ಯಾದೆಗೇಡು ಹತ್ಯೆಗಳಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಜಾತಿ ಸಮುದಾಯಗಳ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರೆ, ಜಾತಿ-ಧರ್ಮದ ಮಿತಿಯನ್ನು ದಾಟಿ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದು ಆಗುತ್ತಿರುವ ಕೊಲೆಗಳಲ್ಲಿ ಎಲ್ಲ ಜಾತಿ, ವರ್ಗದ ಹೆಣ್ಣುಮಕ್ಕಳು ಇದ್ದಾರೆ ಎನ್ನುವುದನ್ನು ನಾನು ಗಮನಿಸಿದ್ದೇನೆ” ಎಂದು ತಿಳಿಸಿದರು.

“ಸದನಗಳಲ್ಲಿ ಮಹಿಳಾ ಸದಸ್ಯರ ಬಗ್ಗೆ ಬಳಕೆ ಆಗುವ ಭಾಷೆ, ಈ ಬಗ್ಗೆ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯಲ್ಲಿ ಬಳಕೆ ಆಗುವ ಭಾಷೆ, ನ್ಯಾಯಾಲಯಗಳಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ವೇಳೆ ಬಳಕೆ ಆಗುವ ಅಸೂಕ್ಷ್ಮ ಮಾತುಗಳನ್ನೆಲ್ಲಾ ನಾನು ಪತ್ರಕರ್ತ ಆಗಿ ನಾನು ಗಮನಿಸಿದ್ದೇನೆ. ನೀವೆಲ್ಲರೂ ಈ ಗಂಡಾಳಿಕೆಯ ಭಾಷೆಗೆ ಪ್ರತೀ ಕ್ಷಣ ಸಾಕ್ಷಿ ಆಗುತ್ತಲೇ ಇರುತ್ತೀರಿ” ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಆಶಾದೇವಿ ಅವರು ಮಾತನಾಡಿ, “ನಲವತ್ತು ವರ್ಷಗಳ ಸಾಹಿತ್ಯ ಕೃಷಿಯ ಆತ್ಮವೇ “ಹೆಣ್ಣು-ದೇಹ” ಆಗಿದೆ. ಈ ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿರುವ ಮೂವರೂ ವಿಷಯ ತಜ್ಞರಾಗಿದ್ದಾರೆ. ಇವರೆಲ್ಲರೂ, ನೀವೆಲ್ಲರೂ ನಿಮ್ಮ ನಿಮ್ಮ ಗ್ರಹಿಕೆ ಮತ್ತು ಅನುಭವಗಳ ಮೂಲಕ ಗೋಷ್ಠಿಯನ್ನು ಅರ್ಥಪೂರ್ಣಗೊಳಿಸುತ್ತೀರಿ ಎನ್ನುವ ಭರವಸೆ ಇದೆ” ಎಂದರು.

ಡಾ.ಸುರೇಶ್ ನಾಗಲಮಡಿಕೆ, ಪ್ರೀತಿ ನಾಗರಾಜ್, ವಸುಧೇಂದ್ರ ಅವರು ವಿಷಯ ಮಂಡನೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments