ಹನಿಟ್ರ್ಯಾಪ್ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು ವಿಚಾರಣೆ ಆರಂಭವಾಗಿದೆ. ಸಿಐಡಿಯ ಅಧಿಕಾರಿಗಳು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ನಿವಾಸ ಜಯಮಹಲ್‌ನಲ್ಲಿರುವ ಬಂಗಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಮಧುಬಲೆಗೆ ಕೆಡವಲು ಪ್ರಯತ್ನಿಸಿದ ಪ್ರಕರಣದ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸಿಐಡಿಗೆ ಸೂಚಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಂದ ಸೂಚನೆ ಬಂದ ಬೆನ್ನಲ್ಲೇ ಸಿಐಡಿ ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿದ್ದಾರೆ. ಸಿಐಡಿಯ ಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಸರ್ಕಾರಿ ಬಂಗಲೆಯಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳೀಯವಾಗಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಕಳೆದ ತಿಂಗಳಿನಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಸ್ತಾಪವಾಗಿದ್ದ ಈ ವಿಚಾರವನ್ನು ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸುನಿಲ್ ಕುಮಾರ್ ಪ್ರಸ್ತಾಪಿಸಿದ್ದರು.
ಯತ್ನಾಳ್‌ರವರ ಪ್ರಸ್ತಾಪಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ ತನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿದೆ. ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ಗಳ ಫ್ಯಾಕ್ಟರಿಯಾಗುತ್ತಿದೆ. ಈ ಕುರಿತು ತಾವು ದೂರು ನೀಡಲಿದ್ದು, ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.ಇದಕ್ಕೆ ಸದನದಲ್ಲೇ ಉತ್ತರ ನೀಡಿದ್ದ ಗೃಹಸಚಿವ ಜಿ.ಪರಮೇಶ್ವರ್, ರಾಜಣ್ಣ ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದರು.
ತಮ್ಮನ್ನು ಮಧುಬಲೆಗೆ ಕೆಡವಲು ಯತ್ನಿಸಿದ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ರಾಜಣ್ಣ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮೂರು ಪುಟಗಳ ಪತ್ರವನ್ನು ಮಂಗಳವಾರ ಸಲ್ಲಿಸಿದ್ದರು. ಆ ಪತ್ರವನ್ನು ಗೃಹ ಸಚಿವರು, ಡಿಜಿಪಿ ಅಲೋಕ್ ಮೋಹನ್ ಅವರಿಗೆ ರವಾನಿಸಿ ತನಿಖೆಗೆ ಸೂಚನೆ ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸುವಂತೆ ಅಲೋಕ್ ಮೋಹನ್ ಅವರು ಸಿಐಡಿಯ ಡಿಜಿಪಿ ಎಂ.ಎ.ಸಲೀಂ ಅವರಿಗೆ ಸೂಚಿಸಿದ ಬೆನ್ನಲ್ಲೇ ತನಿಖಾಧಿಕಾರಿಗಳು, ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಿಐಡಿ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಪಡೆದು ನಂತರ ಬೇರೆ ಸ್ವರೂಪದ ತನಿಖೆ ನಡೆಸುವ ನಿಟ್ಟಿನಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಹನಿಟ್ರ್ಯಾಪ್ ಪ್ರಯತ್ನಗಳಾಗಿ ಸಾಕಷ್ಟು ದಿನಗಳು ಕಳೆದಿವೆ. ಈಗ ದೂರು ನೀಡುವ ಮೂಲಕ ಬೇರೆಯವರ ಹೆಗಲ ಮೇಲೆ ಬಂದು ಕುಳಿತು ಎದುರಾಳಿಗಳತ್ತ ಗುಂಡು ಹಾರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳಿವೆ.
ಸರ್ಕಾರಕ್ಕೆ ಹನಿಟ್ರ್ಯಾಪ್ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವ ಇರಾದೆ ಇದ್ದಿದ್ದರೆ ಈ ಮೊದಲೇ ಹೇಳಿದಂತೆ ಉನ್ನತ ಮಟ್ಟದ ತನಿಖೆ ನಡೆಸಬಹುದಿತ್ತು. ಸಿಐಡಿ ತನಿಖೆ ನಡೆಸುವುದೇ ಆಗಿದ್ದರೆ ಅದಕ್ಕೆ ಇಷ್ಟು ದಿನ ಕಾಯುವ ಅಗತ್ಯವಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ. ಹನಿಟ್ರ್ಯಾಪ್ ಆಗಿದ್ದೇ ಆದರೆ ದೂರು ನೀಡಲು ರಾಜಣ್ಣ ವಿಳಂಬ ಮಾಡಿದ್ದೇಕೆ ಎಂಬ ಚರ್ಚೆಗಳು ಜೋರಾಗಿವೆ.