Homeಕರ್ನಾಟಕಹೊಳೆ ಹುಚ್ಚೇಶ್ವರ ಸಂಸ್ಥೆ ಅನ್ನ-ಅಕ್ಷರ ದಾಸೋಹದಲ್ಲಿ ಅಪಾರ ಕೆಲಸ: ಕೆ ವಿ ಪ್ರಭಾಕರ್

ಹೊಳೆ ಹುಚ್ಚೇಶ್ವರ ಸಂಸ್ಥೆ ಅನ್ನ-ಅಕ್ಷರ ದಾಸೋಹದಲ್ಲಿ ಅಪಾರ ಕೆಲಸ: ಕೆ ವಿ ಪ್ರಭಾಕರ್

ಮಕ್ಕಳನ್ನು ಮೊಬೈಲಿಗೆ, ಟಿವಿಗೆ ಅಂಟಿಸುವ ಬದಲಿಗೆ ಪುಸ್ತಕಗಳಿಗೆ, ಮಣ್ಣಿನಲ್ಲಿ ಆಡಲು, ಆಟದ ಮೈದಾನಗಳಿಗೆ ಹೆಚ್ಚೆಚ್ಚು ತೊಡಗಿಸಿದರೆ ಮಕ್ಕಳ ಸೃಜನಶೀಲತೆ, ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕಿವಿಮಾತು ಹೇಳಿದರು.

ಬಾಗಲಕೋಟೆಯಲ್ಲಿ ಹೊಳೆ ಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಾಲೆಗಳ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ ಆಟದ ವಸ್ತುಗಳಿಗೆ ಮಕ್ಕಳು ಅಂಟಿಕೊಂಡರೆ ಮಕ್ಕಳಲ್ಲಿ ಸೃಜನಶೀಲತೆ ಸತ್ತು ಹೋಗುತ್ತದೆ. ಮಕ್ಕಳು ತಮ್ಮ ಆಟದ ವಸ್ತುವನ್ನು ತಾವೇ ಸೃಷ್ಟಿಸಿಕೊಳ್ಳುವುದರಿಂದ ಸೃಜನಶೀಲತೆ ಚಿಗುರುತ್ತದೆ” ಎಂದರು.

“ಸಮಾಜದಿಂದ ಬಂದಿದ್ದು ವಾಪಾಸ್ ಸಮಾಜಕ್ಕೆ ಹಂಚುವ ಕನಸು ಕಟ್ಟಿಕೊಂಡು ಹೊಳೆ ಹುಚ್ಚೇಶ್ವರ ಸಂಸ್ಥೆ ಕ್ರಿಯಾಶೀಲವಾಗಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಶ್ರಮಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಪಾರವಾಗಿ ಪ್ರೀತಿಸುವ, ಬೆಂಬಲಿಸುವ ಶರಣರ ಜಿಲ್ಲೆ ಬಾಗಲಕೋಟೆ ಅಂದರೆ ನನಗೆ ಅತೀವ ಪ್ರೀತಿ. ಈ ಜಿಲ್ಲೆಯ ಹೊಳೆ ಹುಚ್ಚೇಶ್ವರ ಸಂಸ್ಥೆ ಅನ್ನ-ಅಕ್ಷರ ದಾಸೋಹದಲ್ಲಿ ಅಪಾರ ಕೆಲಸ ಮಾಡುತ್ತಿದೆ” ಎಂದು ಮೆಚ್ಚುಗೆ ಸೂಚಿಸಿದರು.

“ಈಗ ಶಿಕ್ಷಣದ ಸವಾಲು ಮತ್ತು ಸಾಧ್ಯತೆಗಳು ಅಪಾರ ಮರ್ಪಾಡು ಹೊಂದಿವೆ. ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆಯ ಬೆಳವಣಿಗೆ ಜ್ಞಾನದ ಹೊಳೆಯನ್ನೇ ಹರಿಸುತ್ತಿದೆ. ಇಂಥಾ ಸವಾಲಿನ ಹೊತ್ತಲ್ಲಿ ಮಕ್ಕಳಿಗೆ ಹೆಚ್ಚೆಚ್ಚು ಕ್ರಿಯಾಶೀಲ ಮತ್ತು ಮಾನವೀಯ ನೆಲೆಯ ಶಿಕ್ಷಣ ಒದಗಿಸಬೇಕಿದೆ. ಈ ದಿಕ್ಕಿನಲ್ಲಿ ಈ ಸಂಸ್ಥೆ ಶ್ರಮಿಸಲಿ” ಎಂದರು.

ಶಾಸಕ ಹೆಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳೆಬಸಪ್ಪ ಶೆಟ್ಟರ್, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ರಕ್ಷಣಾಧಿಕಾರಿ ಅಮರನಾಥ ರೆಡ್ಡಿ, ಸಿಇಒ ಡಾ.ಶಶಿಧರ್ ಕುರೇರ್, ತೆಂಗಿನ ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ನಟರಾಜ್ ಜಾನಕಿರಾಮ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments