ಬಿಜೆಪಿಯವರ ಆಡಳಿತದಲ್ಲೇ ಹಿಂದೂಗಳು ಸುರಕ್ಷಿತವಾಗಿಲ್ಲ. ಪ್ರಧಾನ ಮಂತ್ರಿಗಳು ಕಾಶ್ಮೀರಕ್ಕೆ ಹೋಗದೆ, ಬಿಹಾರಕ್ಕೆ ಹೋಗಿ ರಾಜಕೀಯ ಭಾಷಣ ಮಾಡುತ್ತಾರೆ ಎಂದರೆ, ಬಿಹಾರ ಚುನಾವಣೆಗೆ ಪಹಲ್ಗಾಮ್ ದಾಳಿ ಬಳಸಿಕೊಳ್ಳುವ ತಂತ್ರ ಹೂಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತಾಡಿದ ಅವರು, ಪಹಲ್ಗಾಮ್ ದಾಳಿಯ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಸಿಂಧೂ ನದಿ ನೀರು ಒಪ್ಪಂದ ಅಮಾನತು ಗೊಳಿಸಿದ್ದಾರೆ. ಆದರೆ ನೀರು ನಿಲ್ಲಿಸಲು ಸಾಧ್ಯ ಇದೆಯಾ? ಇದರ ಬಗ್ಗೆ ಪರಾಮರ್ಶೆ ಆಗಿದೆಯಾ? ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಮೊದಲು ಮಾಧ್ಯಮಕ್ಕೆ ಬಿಡುತ್ತಾರೆ. ಈ ವಿಷಯವನ್ನು ದಾರಿ ತಪ್ಪಿಸಲು ಇಂತಹ ವಿಚಾರ ಚರ್ಚೆಗೆ ಬರುತ್ತಿದೆ. ಇವರ ಆಡಳಿತದಲ್ಲಿ ಹಿಂದೂಗಳೇ ಸುರಕ್ಷಿತರಾಗಿಲ್ಲ” ಎಂದರು.
“ಪ್ರಧಾನಿಗಳು ಕಾಶ್ಮೀರಕ್ಕೆ ಹೋಗಿ ಪ್ರೆಸ್ ಮೀಟ್ ಮಾಡಲಿಲ್ಲ, ಆದರೆ ಬಿಹಾರಕ್ಕೆ ಹೋಗಿ ಭಾಷಣ ಮಾಡಿದರು. ಟೆರರಿಸ್ಟ್ಗಳ ಮನೆ ಧ್ವಂಸ ಮಾಡಿದ್ದಾರೆ ಅಂತ ಸುದ್ದಿಯಾಗಿದೆ, ಹಾಗಾದರೇ ಮೊದಲು ಟೆರರಿಸ್ಟ್ಗಳ ಮನೆ ಇದ್ದ ಬಗ್ಗೆ ಗೊತ್ತಿರಲಿಲ್ಲವೇ” ಎಂದು ಪ್ರಶ್ನಿಸಿದರು.
“ಆ ಟೆಕ್ನಾಲಜಿ ಈ ಟೆಕ್ನಾಲಜಿ ಅಂತ ಮೋದಿ ಮಾತನಾಡುತ್ತಾರೆ. ಎಐ ಟೆಕ್ನಾಲಜಿ ಅಂತ ಹೇಳುತ್ತಾರೆ. ಆದರೆ ಅಲ್ಲಿ ಒಂದು ಡ್ರೋನ್ ವ್ಯವಸ್ಥೆ ಇಲ್ಲ. ಡ್ರೋನ್ ಮೂಲಕ ಬೀಜ ಹಾಕಿ ಮರ ಬೆಳೆಸುತ್ತೇವೆ ಅಂತಾರೆ. ಆದರೆ ಅಲ್ಲಿ ಯಾವ ರೀತಿ ಸೆಕ್ಯುರಿಟಿ ಇದೆ ಅನ್ನೋದರ ಬಗ್ಗೆ ಚರ್ಚೆ ಆಗುತ್ತಿದೆ. ಘಟನೆ ನಡೆದ 2 ಗಂಟೆಗಳ ಬಳಿಕ ಆರ್ಮಿ ಸ್ಥಳಕ್ಕೆ ಹೋಗಿದೆ. ಅಷ್ಟು ಸಮಯ ಏಕೆ ಹಿಡಿಯಿತು” ಎಂದು ಕೇಳಿದರು.
ಸಚಿವ ಆರ್,ಬಿ ತಿಮ್ಮಾಪುರ ಅವರು ಹಿಂದುಗಳನ್ನು ಹುಡುಕಿ ಕೊಂದಿಲ್ಲ ಎಂದ ವಿಚಾರದ ಕುರಿತು ಮಾತನಾಡಿ, “ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿ ನೀಡಿದ ಹೇಳಿಕೆಯನ್ನು ಅಲ್ಲೆಗಳೆಯೋದಕ್ಕೆ ಹಾಗಲ್ಲ. ಆದರೆ ಅಲ್ಲಿದ್ದ ಶೇ.90 ಜನರು ಹಾಗೇ ನಡೆದಿಲ್ಲ ಅಂತ ಹೇಳುಳ್ತಾರೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಅಂತ ಸುಳ್ಳು ಹೇಳಿದ್ರೆ ಅದು ಸರಿಯಲ್ಲ” ಎಂದರು.
“ಬಿಜೆಪಿಯವರು ಪುಲ್ವಾಮಾ ಅಟ್ಯಾಕ್ ಬಗ್ಗೆ ಯಾರು ಮಾತಾಡಲ್ಲ. ಬಿಹಾರ ಚುನಾವಣೆಯಲ್ಲಿ ಇದೇ ವಿಚಾರ ಚರ್ಚೆ ಆಗ್ತಿದೆ. ಬಿಹಾರ ಚುನಾವಣೆ ಇದರ ಮೇಲೆ ಮಾಡೋಕೆ ಹೊರಟಿದ್ದಾರೆ. ಕಾಶ್ಮೀರದಲ್ಲಿ ಟ್ರೇನ್ ಟಿಕೆಟ್ ಮೂರು ಪಟ್ಟು ಹೆಚ್ಚು ಮಾಡಿದ್ದಾರೆ. ಫ್ರೀ ಟಿಕೆಟ್ ಕೊಡೋದು ಬಿಡಿ, ಸೆಂಟ್ರಲ್ ನವರು ಪ್ರೈಸ್ ಹೆಚ್ಚಳ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಜನರ ದುಡ್ಡು ಲೂಟಿ ಹೊಡೆದಿದ್ದಾರೆ” ಎಂದು ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.