ಮುಂಗಾರು ಮಳೆ ಅಬ್ಬರ ಹಿಮಾಚಲ ಪ್ರದೇಶದಲ್ಲಿ ಇನ್ನೂ ನಿಂತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ, ಮೇಘಸ್ಫೋಟಗಳಿಂದ ಭೂ ಕುಸಿತ, ಪ್ರವಾಹ ಉಂಟಾಗಿದ್ದು, ನದಿಗಳು ಅಪಾಯ ಮಟ್ಟ ಮೀರಿ ಹರಿಯುವ ಮೂಲಕ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮಳೆ ಮತ್ತು ಪ್ರವಾಹದಿಂದ ನಲುಗಿರುವ ಹಿಮಾಚಲ ಪ್ರದೇಶ ರಾಜ್ಯದ ಪ್ರಕೃತಿ ವಿಕೋಪ ನಿಧಿಗೆ ಕರ್ನಾಟಕ ಸರ್ಕಾರ ₹5 ಕೋಟಿ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಅಮೂಲ್ಯ ಜೀವಗಳು ಬಲಿಯಾಗಿವೆ. ಅಪಾರ ಆಸ್ತಿ ಹಾನಿ ಸಂಭವಿಸಿದೆ. ಈ ಸಂಕಷ್ಟದ ಸಮಯದಲ್ಲಿ ಕರ್ನಾಟಕದ ಜನರು ನಿಮ್ಮೊಂದಿಗೆ (ಹಿಮಾಚಲದ ಜನರೊಂದಿಗೆ) ನಿಲ್ಲುತ್ತಾರೆ. ಬೆಂಬಲದ ಸಂಕೇತವಾಗಿ, ನಮ್ಮ ಸರ್ಕಾರ ವಿಪತ್ತು ಪರಿಹಾರ ಮತ್ತು ಪುನರ್ವಸತಿಗಾಗಿ ₹5 ಕೋಟಿ ನೆರವು ನೀಡಿದೆ ಎಂದು ಪತ್ರದ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಜೂನ್ 20ರಿಂದ ಪ್ರವೇಶಿಸಿದ ಮಾನ್ಸೂನ್ ಮಳೆಗೆ ಇಲ್ಲಿಯವರೆಗೆ ಅಂದರೆ, ಸೆಪ್ಟೆಂಬರ್ 1ರ ವರೆಗೆ ಉಂಟಾದ ಹಾನಿ ₹3158.04. ಕೋಟಿಯಾಗಿದೆ.
ಹಿಮಾಚಲದಲ್ಲಿ ಮಳೆ ಈ ಬಾರಿ ದೊಡ್ಡ ಪ್ರಮಾದ ಉಂಟುಮಾಡಿದ್ದು, ಭೂ ಕುಸಿತ, ಪ್ರವಾಹದಿಂದ ಜೂನ್ 20ರಿಂದ ಸೆಪ್ಟೆಂಬರ್ 1ರ ವರೆಗೆ 362 ಮಂದಿ ಸಾವನ್ನಪ್ಪಿದ್ದರೆ, 41 ಮಂದಿ ಕಣ್ಮರೆಯಾಗಿದ್ದು, 385 ಮಂದಿ ಗಾಯಗೊಂಡಿದ್ದಾರೆ. ಮೇಘಸ್ಫೋಟ ಮತ್ತು ಪ್ರವಾಹದಿಂದ 4,196 ಮನೆಗಳಿಗೆ ಹಾನಿಯಾಗಿದೆ. 861 ಕಚ್ಚಾ ಮತ್ತು ಪಕ್ಕಾ ಮನೆಗಳು ಹಾನಿಗೊಂಡಿದ್ದು, 3,335 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇದರ ಹೊರತಾಗಿ 3,813 ಕೊಟ್ಟಿಗೆಗಳು ಹಾನಿಗೊಂಡಿದ್ದು, 471 ಅಂಗಡಿ ಮತ್ತು ಫ್ಯಾಕ್ಟರಿಗಳು ಹಾಳಾಗಿವೆ.
ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ, ಭೂ ಕುಸಿತದಿಂದಾಗಿ ಲೋಕೋಪಯೋಗಿ ಇಲಾಖೆ ₹1776.12 ಕೋಟಿ ಹಾನಿ ಅನುಭವಿಸಿದೆ. ಇಲ್ಲಿಯವರೆಗೆ ರಾಜ್ಯದ ₹1,281 ರಸ್ತೆಗಳು ಬಂದ್ ಆಗಿದ್ದು, ಇದರಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಿವೆ. ಕುಡಿಯುವ ನೀರಿನ ಯೋಜನೆ ಹಾನಿಗೊಂಡ ಪರಿಣಾಮ ಜಲ ಶಕ್ತಿ ಇಲಾಖೆ ಕೂಡ ₹1101.11 ಕೋಟಿ ಮಷ್ಟ ಅನುಭವಿಸಿದೆ. ಇಲ್ಲಿಯವರೆಗೆ 790 ಕುಡಿಯುವ ನೀರಿನ ಯೋಜನೆಗೆ ಅಡ್ಡಿಯಾಗಿದೆ. ಇದರ ಹೊರತಾಗಿ ₹11.45 ಕೋಟಿ ಬೆಳೆ ನಷ್ಟವಾಗಿದ್ದು, ತೋಟಗಾರಿಕೆ ₹27.43 ಕೋಟಿ ನಷ್ಟ ಕಂಡಿದೆ. ವಿದ್ಯುತ್ ಮಂಡಳಿ ₹139.46 ಕೋಟಿ ನಷ್ಟ ಅನುಭವಿಸಿದೆ.