ಕೆಆರ್ಎಸ್ ಡ್ಯಾಂ ಬಳಿ ಡಿಸ್ನಿಲ್ಯಾಂಡ್ ಮಾದರಿಯ ಮನರಂಜನಾ ಪಾರ್ಕ್ ಕಾಮಗಾರಿ ಮತ್ತು ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಕರ್ನಾಟಕ ಹೈಕೋರ್ಟ್ನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್, ಸಿಎಂ.ಜೋಷಿ ಅವರಿದ್ದ ಪೀಠ ಕರ್ನಾಟಕ ಸರ್ಕಾರಕ್ಕೆ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್ ನೀಡಿ ವಿವರಣೆ ಕೋರಿದೆ.
ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ನ್ಯಾಯಾಲಯಕ್ಕೆ ಹಾಜರಾದರು. ಡ್ಯಾಮ್ ಬಳಿ 120 ಅಡಿಯ ಕಾವೇರಿ ವಿಗ್ರಹ ಸ್ಥಾಪಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಅದರ ಕಾಮಗಾರಿಗೆ ಯಂತ್ರಗಳನ್ನು ಉಪಯೋಗಿಸಿರುವ ಫೋಟೊ ಸಲ್ಲಿಕೆ ಮಾಡಲಾಗಿದೆ.
ಸದ್ಯಕ್ಕೆ ಕಾವೇರಿ ಪ್ರತಿಮೆ ಮಾತ್ರ ಸ್ಥಾಪಿಸಲು ಟೆಂಡರ್ ನೀಡಲಾಗಿದೆ. ಕಾವೇರಿ ಪ್ರತಿಮೆ ಸ್ಥಾಪನೆಗೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆ. ಮನರಂಜನಾ ಪಾರ್ಕ್ ಟೆಂಡರ್ ಪೂರ್ಣಗೊಂಡಿಲ್ಲವೆಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮತ್ತು ಕಾವೇರಿ ಆರತಿ ಆಯೋಜಿಸುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪೂರಕವಾಗಿ ಕೆಲವು ದಾಖಲೆಗಳನ್ನು ಸಲ್ಲಿಸಲು ಹೈಕೋರ್ಟ್ ಬುಧವಾರ ಸೂಚಿಸಿ, ಗುರುವಾರಕ್ಕೆ ವಿಚಾರಣೆ ಮುಂದೂಡಿತ್ತು.
ಇಂದು ವಿಚಾರಣೆ ನಡೆಸಿದ ಹೈಕೋರ್ಟ್‌ಗೆ ಅಣೆಕಟ್ಟು, ಪರಿಸರ, ನದಿಗೆ ಆಗುತ್ತಿರುವ ಅಪಾಯದ ಬಗ್ಗೆ ರೈತ ಸಂಘ ಮನವರಿಕೆ ಮಾಡಿ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.