Homeಕರ್ನಾಟಕಬೈಕ್‌ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಲು ಹೈಕೋರ್ಟ್ ಅನುಮತಿ

ಬೈಕ್‌ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಲು ಹೈಕೋರ್ಟ್ ಅನುಮತಿ

ರಾಜ್ಯದಲ್ಲಿ ಬೈಕ್‌ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಲು ಹೈಕೋರ್ಟ್ ಅನುಮತಿ ನೀಡಿದ್ದು, ಈ ಮೂಲಕ ಬೈಕ್ ಟ್ಯಾಕ್ಸಿಗಳಿಗೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಎತ್ತಿಹಿಡಿದಿತ್ತು. ಆದರೆ ಇದೀಗ ವಿಭಾಗೀಯ ಪೀಠ ಆದೇಶ ರದ್ದುಗೊಳಿಸಿ, ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ.

ಒಲಾ, ಊಬರ್ ಮತ್ತಿತರ ಅಗ್ರಿಗೇಟರ್ ಗಳು ಸಲ್ಲಿಸಿದ ಮೇಲ್ಮನವಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಮಾನ್ಯ ಮಾಡಿದೆ. ಇದೇ ವೇಳೆ ಸಾರಿಗೆ ವಾಹನಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿಯನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ.

ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಗಳು ಸಾರಿಗೆ ವಾಹನಗಳನ್ನಾಗಿ ಬಳಸಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಹ ಮನವಿಗಳನ್ನು ಸರ್ಕಾರ ಪುರಸ್ಕರಿಸಿ ಅನುಮತಿ ನೀಡಬೇಕು. ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 74(2) ರ ಪ್ರಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಷರತ್ತುಗಳನ್ನು ವಿಧಿಸಬಹುದು ಎಂದು ಪೀಠ ಆದೇಶ ನೀಡಿದೆ. ಇದರಿಂದ ಬೈಕ್ ಟ್ಯಾಕ್ಸಿ ಚಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಚಾರಣೆ ವೇಳೆ ವಾದ ಮಂಡಿಸಿದ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್, ರಾಜ್ಯ ಸರ್ಕಾರದ ನಡೆಯು ಬೈಕ್ ಟ್ಯಾಕ್ಸಿ ಚಾಲಕರ ಸುಮಾರು 6 ಲಕ್ಷ ಕುಟುಂಬಗಳ ಬದುಕು ಸಂಕಷ್ಚಕ್ಕೆ ದೂಡುತ್ತದೆ. ಈ ಕುಟುಂಬಗಳು ಬದುಕು ಸಾಗಿಸಲು ತನ್ನ ದುಡಿಮೆ ಹಣದಿಂದ ಬೈಕ್ ಖರೀದಿಸಿ, ಸಾಲವನ್ನೂ ಪಡೆದಿದ್ದಾರೆ ಎಂದು ತಿಳಿಸಿತು.

“ಸರ್ಕಾರ ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸುವ ಬದಲು, ಯಾವುದೇ ಕಾನೂನು-ಕ್ರಮದ ಸಮಸ್ಯೆಗಳು ಉಂಟಾದರೆ ತಕ್ಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೈಕ್ ಟ್ಯಾಕ್ಸಿಗಳಿಗೆ ನೋಂದಣಿ ನೀಡದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ವಿಚಾರಣೆ ವೇಳೆ ಹೇಳಿತು.

ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ; ಸಚಿವ ರಾಮಲಿಂಗಾ ರೆಡ್ಡಿ

ಈ ನಡುವೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಇನ್ನೂ ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ. ಆದೇಶದ ಪ್ರತಿ ಬಂದ ನಂತರ ಅದನ್ನು ಕೂಲಂಕಷವಾಗಿ ಪರಿಶೀಲಿಸುತ್ತೇನೆ. ಈ ಬಗ್ಗೆ ಇಲಾಖೆಯ ಕಮಿಷನರ್ ಅವರೊಂದಿಗೆ ಚರ್ಚಿಸಿ, ಮುಂದಿನ ಕಾನೂನು ಹೋರಾಟ ಅಥವಾ ತೀರ್ಮಾನದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments