Homeಕರ್ನಾಟಕತುಮಕೂರಿನ ಎಲ್ಲ ತಾಲೂಕಿಗೂ ನೀರು ಒದಗಿಸಲು ಕ್ರಮ: ಡಿ ಕೆ ಶಿವಕುಮಾರ್

ತುಮಕೂರಿನ ಎಲ್ಲ ತಾಲೂಕಿಗೂ ನೀರು ಒದಗಿಸಲು ಕ್ರಮ: ಡಿ ಕೆ ಶಿವಕುಮಾರ್

ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ. ಎಲ್ಲ ತಾಲೂಕಿಗೂ ನೀರು ಒದಗಿಸಲು ಹೇಮಾವತಿ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, “ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಜನಪ್ರತಿನಿಧಿಗಳ ಸಭೆ ಕರೆದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿಂದೆ ಶಾಸಕರು ತಾಂತ್ರಿಕ ಸಮಿತಿ ರಚಿಸಿ ಎಂದಿದ್ದರು. ತಾಂತ್ರಿಕ ಸಮಿತಿ ವರದಿ ನಂತರ ಕಾಮಗಾರಿಗೆ ಮುಂದಾದರೂ ಮತ್ತೆ ಪ್ರತಿಭಟನೆ ಮಾಡಿದ್ದರು. ಅವರು ಪೈಪ್ ಲೈನ್ ಹಾಕಬೇಡಿ ತೆರೆದ ಕಾಲುವೆಯಲ್ಲಿ ನೀರು ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಪೈಪ್ ಲೈನ್ ಮಾಡುವುದು ಸರ್ಕಾರದ ತೀರ್ಮಾನ” ಎಂದರು.

“ಕೇಂದ್ರ ಸಚಿವ ಸೋಮಣ್ಣ ಅವರು ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರಿಂದ ಪರಿಶೀಲನೆಗೆ ಶಿಫಾರಸ್ಸು ಮಾಡಿದ್ದು, ಇದಕ್ಕೆ ಒಪ್ಪಿಗೆ ನೀಡಲಾಗಿದೆ. ನಮಗೆ ಕೇವಲ ಕುಣಿಗಲ್ ತಾಲೂಕು ಮಾತ್ರವಲ್ಲ. ಇಡೀ ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಿದ್ದು, ಅದಕ್ಕೆ ಪೂರಕವಾಗಿ ನಾನು ಯೋಜನೆ ಸಿದ್ಧಪಡಿಸಿದ್ದೇನೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೀರನ್ನು ಹಂಚಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿತಕಾಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

“ನಮ್ಮ ಸರ್ಕಾರ ಇದ್ದಾಗ ಯೋಜನೆ ಆರಂಭಿಸಿ ಕಾಮಗಾರಿ ನಡೆಸಿದ್ದೆವು. ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಿತ್ತು. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ವಾಪಸ್ ಪಡೆದರು. ಈ ಯೋಜನೆ ಮುಂದುವರಿಸುವುದಾಗಿ ಯಡಿಯೂರಪ್ಪ ಹೇಳಿದರೂ ನಂತರ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದರು. ಇದೆಲ್ಲವೂ ಸರ್ಕಾರದ ತೀರ್ಮಾನ. ಮೆಡಿಕಲ್ ಕಾಲೇಜು ನಿರ್ಮಾಣದ ಯೋಜನೆ 600 ಕೋಟಿಯಿಂದ 900 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ಜವಾಬ್ದಾರಿ ಯಾರು” ಎಂದು ಪ್ರಶ್ನಿಸಿದರು,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments