ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಸುಕಿನ 3 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಪ್ರಯಾಣಿಕರು ಸಜೀವ ದಹನವಾಗಿರುವ ದುರಂತ ಬಗ್ಗೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
“ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ” ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಇಂತಹ ದುರಂತಗಳು ಮರುಕಳಿಸದಿರಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
“ಚಿತ್ರದುರ್ಗದ ಸಮೀಪ ಖಾಸಗಿ ಬಸ್ʼವೊಂದು ಅಪಘಾತಕ್ಕೆ ತುತ್ತಾಗಿ ಬೆಂಕಿ ಹೊತ್ತಿ ಉರಿದು ಹಲವರು ಧಾರುಣ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಈ ದುರಂತದಲ್ಲಿ ಇನ್ನೂ ಹೆಚ್ಚಿನ ಸಾವು-ನೋವು ಆಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ದುರಂತದಲ್ಲಿ ಜೀವ ಚೆಲ್ಲಿದವರಿಗೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಅವರ ಚಿಕಿತ್ಸೆಗೆ ರಾಜ್ಯ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಿ. ಅಗಲಿದವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು” ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


