ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಕೋರಿದರು.
ರಾಜ್ಯಸಭೆಯಲ್ಲಿ ರೇಲ್ವೆ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ಅಗತ್ಯವನ್ನು ಒತ್ತಿ ಹೇಳಿದರು.
“ಹಿಂದಿನ ಸರ್ಕಾರಗಳು ಕರ್ನಾಟಕದ ಹಲವಾರು ನಿರ್ಣಾಯಕ ರೇಲ್ವೆ ಯೋಜನೆಗಳನ್ನು ನಿರ್ಲಕ್ಷಿಸಿವೆ. ಆದಾಗ್ಯೂ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ರಾಜ್ಯಕ್ಕೆ ರೇಲ್ವೆ ಅನುದಾನ ಹಂಚಿಕೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ಹಂಚಿಕೆಯು ₹800 ಕೋಟಿಯಿಂದ ₹7,000 ಕೋಟಿಗೂ ಮೀರಿ ಹೆಚ್ಚಾಗಿದೆ” ಎಂದರು.
“ನರೇಂದ್ರ ಮೋದಿ ಅವರ ಆಡಳಿತದ ಅಡಿಯಲ್ಲಿ ರಾಜ್ಯದ ಅನೇಕ ರೇಲ್ವೆ ಯೋಜೆಗಳಿಗೆ ಮರು ಚಾಲನೆ ಸಿಕ್ಕಿದೆ. ಆದಾಗ್ಯೂ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಮತ್ತು ಶೃಂಗೇರಿಗೆ ರೇಲ್ವೆ ಮಾರ್ಗ ಮತ್ತು ಬೆಂಗಳೂರಿನಿಂದ ಭಾರತದ ಇತರೆ ಭಾಗಗಳಿಗೆ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಇನ್ನೂ ಬಾಕಿ ಉಳಿದಿವೆ. ಇವುಗಳ ಕಡೆ ರೇಲ್ವೆ ಸಚಿವರು ತಕ್ಷಣ ಗಮನ ಹರಿಸಬೇಕಾಗಿದೆ” ಎಂದು ಒತ್ತಿ ಹೇಳಿದರು.
“ಹಾಸನದಿಂದ ಮೈಸೂರಿಗೆ ರೇಲಿನಲ್ಲಿ ಪ್ರಯಾಣ ಮಾಡಿದರೆ ಟಿಕೆಟ್ ವೆಚ್ಚ ₹30 ಆಗುತ್ತದೆ. ಆದರೆ ಬಸ್ ದರಗಳು ಬಹುತೇಕ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿರುತ್ತವೆ. ಇದಕ್ಕಾಗಿಯೇ ರೇಲ್ವೆ ಯೋಜನೆಗಳ ವಿಸ್ತರಣೆ ಪೂರ್ಣ ವೇಗದಲ್ಲಿ ಮುಂದುವರಿಯಬೇಕು” ಎಂದು ಮನವಿ ಮಾಡಿದರು.
“ಹಿಂದೆ ಆಧುನಿಕ ಮೂಲಸೌಕರ್ಯಗಳ ಕೊರತೆಯಿಂದಾಗಿ ರೇಲ್ವೆ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿದ್ದವು. ಆದರೆ ಇಂದು ಸುರಕ್ಷತಾ ಮಾನದಂಡಗಳು ಗಮನಾರ್ಹವಾಗಿ ಸುಧಾರಿಸಿವೆ ಎಂದು ಅವರು ಹೇಳಿದರು. ಇದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಯತ್ನಗಳು ಕಾರಣ” ಎಂದರು.