ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಜಾಮೀನು ರದ್ಧತಿ ಕುರಿತು ಎಸ್ಐಟಿ ಸಲ್ಲಿಸಿದ ಅರ್ಜಿವನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿ ಮಾಡಿದೆ.
ಮಾಜಿ ಸಂಸದ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅಪಹರಣ ಮಾಡಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಎಚ್ ಡಿ ರೇವಣ್ಣಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಆದೇಶ ರದ್ದು ಕೋರಿ ಎಸ್ಐಟಿ ಅರ್ಜಿ ಸಲ್ಲಿಸಿತ್ತು.
ಆಗಸ್ಟ್ 1ರಂದು ವಾದ ಆಲಿಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ಬುಧವಾರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅರ್ಜಿಯನ್ನು ಕೈಗೆತ್ತಿಕೊಂಡು ಶಾಸಕ ಎಚ್ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವ ಆದೇಶ ಎತ್ತಿ ಹಿಡಿಯಿತು. ಎಸ್ಐಟಿ ಅರ್ಜಿಯನ್ನು ವಜಾ ಮಾಡಿತು.
ರೇವಣ್ಣ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಇಡೀ ಘಟನೆ ನೋಡಿದರೆ ಇಲ್ಲಿ ಐಪಿಸಿ ಸೆಕ್ಷನ್ 364ಎ ಅನ್ವಯಿಸುವುದಿಲ್ಲ. ಪ್ರಕರಣದಲ್ಲಿ ಯಾವುದೇ ಆರೋಪಿಯು ಸಂತ್ರಸ್ತೆಗೆ ಯಾವುದೇ ಹಾನಿ ಮಾಡಿಲ್ಲ. ಬೆದರಿಕೆ ಹಾಕಿಲ್ಲ ಎಂಬುದು ವಿಚಾರಣಾಧೀನ ನ್ಯಾಯಾಲಯ ಸ್ಪಷ್ಟವಾಗಿ ಆದೇಶದಲ್ಲಿ ದಾಖಲಿಸಿದೆ” ಎಂದಿದ್ದರು. ರೇವಣ್ಣ ಪರವಾಗಿ ವಕೀಲ ಜಿ ಅರುಣ್ ವಕಾಲತ್ತು ಹಾಕಿದ್ದರು.
ಆರೋಪಿಗಳಿಗೆ ಜಾಮೀನು ಮಂಜೂರು
ಇದೇ ವೇಳೆ ಅಪಹರಣ ಪ್ರಕರಣದ ಇತರೆ ಆರೋಪಿಗಳ ಜಾಮೀನು ಅರ್ಜಿ ಸಹ ವಿಚಾರಣೆಯಾಗಿದೆ. ಸಂತ್ರಸ್ತೆ ಅಪಹರಣದ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಾಸನದ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಎಚ್ ಕೆ ಸುಜಯ್, ಎಚ್ ಎನ್ ಮಧು, ಎಸ್ ಟಿ ಕೀರ್ತಿ, ಎಚ್ ಡಿ ಮಾಯು ಗೌಡ, ಕೆ ಎ ರಾಜಗೋಪಾಲ್ ಅವರಿಗೆ ಎಲ್ಲರಿಗೂ ಜಾಮೀನು ಮಂಜೂರು ಮಾಡಿದೆ.