ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ. ಮೈತ್ರಿ ಪಕ್ಷದಿಂದ ನಾನೇ ಅಭ್ಯರ್ಥಿ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದರು.
ರಾಮನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿ, “ಕಳೆದ ವಾರ ಡಿಸಿಎಂ ಡಿ ಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ನಡೆಸಿದ ಮೂರು ದಿನಗಳ ಜನಸ್ಪಂದನಾ ಕಾರ್ಯಕ್ರಮ ಜನಸ್ಪಂದನವಲ್ಲ, ಅದು ಸರ್ಕಾರಿ ಸಂತೆ” ಎಂದು ಟೀಕಿಸಿದರು.
“ಅಧಿಕಾರಿಗಳನ್ನು ಚನ್ನಪಟ್ಟಣಕ್ಕೆ ಕರೆತಂದು ಹೆದರಿಸಿ ಜನರಿಗೆ ಆಸೆ ತೋರಿಸುವ ಕೆಲಸ ನಡೆದಿದೆ. ಕಳೆದ ಒಂದು ಕಾಲು ವರ್ಷದ ಅವಧಿಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ” ಎಂದರು.
“ಸರ್ಕಾರ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಡಿ ಕೆ ಶಿವಕುಮಾರ್ ಬಂದಿರಲಿಲ್ಲ. ಈಗ ಚನ್ನಪಟ್ಟಣ ಖಾಲಿ ಇದೆ. ಬಂದಿದ್ದೇನೆ ಅಂತ ಸುಳ್ಳು ಹೇಳಿದ್ದಾರೆ. ಜನರಿಗೆ ಮನೆ ಕೊಡುವೆ, ಸೈಟ್ ಕೊಡುವೆ ಅಂತ ಸುಳ್ಳು ಆಶ್ವಾಸನೆ ಕೊಡ್ತಿದ್ದಾರೆ. ಟೌನ್ ವ್ಯಾಪ್ತಿ ಬಿಟ್ಟರೆ ಬಹುತೇಕ ತಾಲೂಕಿನ ಜನತೆಗೆ ಮನೆ ಸಮಸ್ಯೆ ಇಲ್ಲ” ಎಂದು ಹೇಳಿದರು.
“ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಒನ್ ಮ್ಯಾನ್ ಶೋ ಮಾಡಿದ್ದಾರೆ. ಎಂಪಿಗೆ ಆಹ್ವಾನ ನೀಡಿಲ್ಲ, ನನಗೆ ಆಹ್ವಾನ ನೀಡಿಲ್ಲ. ಸರ್ಕಾರದ ಪ್ರೋಟೋಕಾಲ್ ಸರಿಯಾಗಿ ಫಾಲೋ ಮಾಡದೇ ಕಾರ್ಯಕ್ರಮ ಮಾಡಿದ್ದಾರೆ. ಇದು ಕೇವಲ ಚುನಾವಣಾ ತಂತ್ರ” ಎಂದು ಹರಿಹಾಯ್ದರು.
ಸರ್ಕಾರದ ಕುಸಿಯುವ ಹಂತ ತಲುಪಿದೆ. ಅವರ ಸರ್ಕಾರದಲ್ಲೇ ಸಾಕಷ್ಟು ಗೊಂದಲ ಇದೆ. ನೂರೆಂಟು ಹಗರಣಗಳು ಬೆಳಕಿಗೆ ಬರ್ತಿದೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ನೋಡಿದ್ದೇವೆ. ಉಪಚುನಾವಣೆ ಹೊತ್ತಿಗೆ ಅವರ ಸರ್ಕಾರ ಇರುತ್ತೋ, ಇರಲ್ವೋ ಗೊತ್ತಿಲ್ಲ” ಎಂದು ಸಿ ಪಿ ಯೋಗೇಶ್ವರ್ ಹೇಳಿದರು.