ಹಾಸನ: ಕ್ಷುಲ್ಲಕ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಮೂವರು ಮಹಿಳೆಯರು ಹಲ್ಲೆ ಮಾಡಿ ಮೊಬೈಲ್ ಒಡೆದು ಹಾಕಿರುವ ಘಟನೆ ನಗರದ ಬಸ್ ನಿಲ್ದಾಣದಲ್ಲಿ ರಾತ್ರಿ ನಡೆದಿದೆ.
ಹಾಸನದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿದ್ದರೂ ಮೂವರು ಮಹಿಳೆಯರ ಬಸ್ ಹತ್ತಿದ್ದಾಗ ಕಂಡಕ್ಟರ್ ಸೀಟ್ ಇಲ್ಲ, ಯಾರಾದರೂ ಇಳಿಯುವವರಿದ್ದರೆ ಬಸ್ ನಿಲ್ದಾಣದಲ್ಲೇ ಇಳಿಯಿರಿ ಎಂದಿದ್ದಾರೆ.
ಬಸ್ ಹೊರಟ ನಂತರ ಮೂವರು ಮಹಿಳೆಯರು ಬಸ್ ನಿಲ್ಲಿಸಿ ಇಳಿಯುತ್ತೇವೆ ಎಂದಿದ್ದಾರೆ. ನಾನು ಅಲ್ಲಿಯೇ ಹೇಳಿದೆ ಹೀಗೇಕೆ ಮಾಡುತ್ತೀರಿ ಮುಂದೆ ನಿಲ್ಲಿಸುತ್ತೇನೆ ಅಲ್ಲಿ ಇಳಿಯಿರಿ ಎಂದು ನಿರ್ವಾಹಕ ಹೇಳಿದ್ದಾರೆ. ಚಲಿಸುತ್ತಿದ್ದ ಬಸ್‌ನಿಂದಲೇ ಮಹಿಳೆಯರು ಇಳಿಯುವ ಯತ್ನ ಮಾಡಿದಾಗ ಬಸ್ ನಿಲ್ಲಿಸಿದ್ದಾರೆ.
ಇದರಿಂದ ಕೆರಳಿದ ಮಹಿಳೆಯರು ಕಂಡಕ್ಟರ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇದನ್ನು ತನ್ನ ಮೊಬೈಲ್‌ನಲ್ಲಿ ನಿರ್ವಾಹಕ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರಿಂದ ಆಕ್ರೋಶಗೊಂಡ ಮಹಿಳೆಯರು ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ.
ಈ ವೇಳೆ ಮೂವರು ಮಹಿಳೆಯರು ಹಾಗೂ ಚಾಲಕ, ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ನಿರ್ವಾಹಕ ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಮೂವರು ಮಹಿಳೆಯರ ವರ್ತನೆ ಬಗ್ಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ನಿರ್ವಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಮೊಬೈಲ್ ಕೊಡಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಕಂಡಕ್ಟರ್ ದೂರು ಕೊಡಲು ಮುಂದಾಗಿದ್ದು, ಸ್ಥಳಕ್ಕೆ ಆಗಮಿಸಿದ ಹಲ್ಲೆ ನಡೆಸಿದ ಮಹಿಳೆಯೊಬ್ಬರ ಪತಿ ನಿರ್ವಾಹಕನಲ್ಲಿ ಕ್ಷಮೆ ಕೇಳಿ 10 ಸಾವಿರ ರು ಮೌಲ್ಯದ ಹೊಸ ಮೊಬೈಲ್ ಕೊಡಿಸಿ ಪೊಲೀಸ್ ಠಾಣೆಗೆ ದೂರು ನೀಡದಂತೆ ಮನವಿ ಮಾಡಿದ್ದಾರೆ.