ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಗುರುವಾರ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಒಬ್ಬ ವ್ಯಕ್ತಿಯ ಶವ ಕಾರಿನ ಒಳಗೆ ಕಂಡುಬಂದಿದ್ದು, ಕಾರಿನ ಹೊರಗಡೆ ಮತ್ತೊಂದು ಶವ ಪತ್ತೆಯಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗುಂಡಿನ ದಾಳಿ ವೇಳೆ ವ್ಯಕ್ತಿಯೊಬ್ಬನ ಹತ್ಯೆ ಮಾಡಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಎಫ್ಎಸ್ಎಲ್ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, “ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ಸಂಭವಿಸಿದೆ” ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಗಳ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಕಾರಿನ ಹೊರಗಿರುವ ಶವದ ತಲೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿರುವ ಮಾಹಿತಿ ಇದೆ.