ರಾಜ್ಯದಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಆನೆಗಳನ್ನು ಹಸ್ತಾಂತರಿಸಿದರು.
ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಕೃಷ್ಣ, ಅಭಿಮನ್ಯು, ರಂಜನ್ ಮತ್ತು ದೇವ ಎಂಬ ನಾಲ್ಕು ಆನೆಗಳನ್ನು ಇಂದು (ಮೇ 21) ವಿಧ್ಯುಕ್ತವಾಗಿ ಹಸ್ತಾಂತರಿಸಲಾಯಿತು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, “ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ. ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ” ಎಂದರು.
“ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ” ಎಂದು ಹೇಳಿದರು.
ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಆನೆಗಳಿಗೆ ಪೂಜೆ ಸಲ್ಲಿಸಿದರು. ಸಚಿವರುಗಳಾದ ಕೆ.ಜೆ. ಜಾರ್ಜ್, ಸುಧಾಕರ್, ಬೈರತಿ ಸುರೇಶ್, ರಹೀಂಖಾನ್, ದಿನೇಶ್ ಗುಂಡೂರಾವ್ ಮತ್ತಿತರರು ಉಪಸ್ಥಿತರಿದ್ದರು.
ಆಂಧ್ರಪ್ರದೇಶಕ್ಕೆ ನೀಡಲಾದ ಆನೆಗಳ ವಿವರ
- ಕೃಷ್ಣ 15 ವರ್ಷ. 2022ರಲ್ಲಿ ಚಿಕ್ಕಮಗಳೂರಿನಲ್ಲಿ ಈ ಆನೆ ಸೆರೆ ಹಿಡಿಯಲಾಗಿತ್ತು.
- ಶಿವಮೊಗ್ಗ ಅಭಿಮನ್ಯು- 14 ವರ್ಷ 2023ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾದ ಆನೆ.
- ದೇವ -39 ವರ್ಷ ಕುಶಾಲನಗರದಲ್ಲಿ 2019ರಲ್ಲಿ ಸೆರೆ ಹಿಡಿದ ಆನೆ.
- ರಂಜನ್ ದುಬಾರೆ ಶಿಬಿರದಲ್ಲೇ ಜನಿಸಿದ ಆನೆ. ವಯಸ್ಸು 26 ವರ್ಷ. (ಆಂಧ್ರಪ್ರದೇಶ ಒಟ್ಟು 8 ಆನೆ ನೀಡುವಂತೆ ಮನವಿ ಮಾಡಿದ್ದು, ಕರ್ನಾಟಕ 6 ಆನೆ ನೀಡಲು ಸಮ್ಮತಿಸಿದೆ)