Homeಕರ್ನಾಟಕಮೈಸೂರು, ಧಾರವಾಡ ವಿವಿಗೆ ಹಣಕಾಸು ನೆರವು ನೀಡುವಂತೆ ಕೇಂದ್ರವನ್ನು ಕೋರಿದ ಹೆಚ್.ಡಿ. ದೇವೇಗೌಡ

ಮೈಸೂರು, ಧಾರವಾಡ ವಿವಿಗೆ ಹಣಕಾಸು ನೆರವು ನೀಡುವಂತೆ ಕೇಂದ್ರವನ್ನು ಕೋರಿದ ಹೆಚ್.ಡಿ. ದೇವೇಗೌಡ

ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮನವಿ ಮಾಡಿದರು.

ಈ ಬಗ್ಗೆ ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, “ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾಲಯಗಳು ಶಿಕ್ಷಣ ಕ್ಷೇತ್ರಕ್ಕೆ ಭಾರೀ ಕೊಡುಗೆ ನೀಡಿವೆ. ಆದರೆ ತೀವ್ರವಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಇದರಿಂದಾಗಿ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ವಿವಿಗಳು ಹೆಣಗಾಡುತ್ತಿವೆ. ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಾಯಕ್ಕೆ ಬರಬೇಕು” ಎಂದು ದೇವೇಗೌಡರು ಹೇಳಿದರು.

“ಶಿಕ್ಷಣವು ಅತ್ಯಂತ ಮಹತ್ವದ ವಿಷಯವಾಗಿದ್ದು, ಕೇಂದ್ರ ಮತ್ತು ರಾಜ್ಯಗಳೆರಡೂ ಶಿಕ್ಷಣ ಸಂಸ್ಥೆಗಳು ಆರ್ಥಿಕ ಕೊರತೆಯಿಂದ ಬಳಲದಂತೆ ನೋಡಿಕೊಳ್ಳಬೇಕು. 1916ರಲ್ಲಿ ಇಡೀ ಭಾರತದ ಆರನೇ ವಿಶ್ವವಿದ್ಯಾಲಯವಾಗಿ ಸ್ಥಾಪನೆಯಾದ ಮೈಸೂರು ವಿಶ್ವವಿದ್ಯಾಲಯದ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದ ದೇವೇಗೌಡರು, ದೇಶದಲ್ಲಿ ಉನ್ನತ ಶಿಕ್ಷಣವನ್ನು ನೀಡುವಲ್ಲಿ ವಿವಿಯು ನಿರ್ಣಾಯಕ ಪಾತ್ರ ವಹಿಸಿದೆ” ಎಂದರು.

“ಅಷ್ಟೇ ಅಲ್ಲ, ಭಾರತೀಯ ವಿಜ್ಞಾನ ಕಾಂಗ್ರೆಸ್‌ ನಂತಹ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೈಸೂರು ವಿಶ್ವವಿದ್ಯಾಲಯವು ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಬೋಧನೆಗೆ ಗಣನೀಯ ಕೊಡುಗೆ ನೀಡಿದೆ. ಆದಾಗ್ಯೂ, ಅದರ ಪ್ರತಿಷ್ಠಿತ ಸ್ಥಾನಮಾನದ ಹೊರತಾಗಿಯೂ, ವಿಶ್ವವಿದ್ಯಾಲಯವು ಈಗ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ, ಅಧ್ಯಾಪಕರನ್ನು ಉಳಿಸಿಕೊಳ್ಳಲು ಮತ್ತು ಸಂಬಳವನ್ನು ಪಾವತಿಸಲು ಹೆಣಗಾಡುತ್ತಿದೆ” ಎಂದು ಮಾಜಿ ಪ್ರಧಾನಿಗಳು ಕಳವಳ ವ್ಯಕ್ತಪಡಿಸಿದರು.

“ಅದೇ ರೀತಿ, ಉತ್ತರ ಕರ್ನಾಟಕದ ಭಾಗದಲ್ಲಿ ಅಗಾಧ ಪ್ರಮಾಣದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿರುವ ಧಾರವಾಡ ವಿಶ್ವವಿದ್ಯಾಲಯವು ಸಹ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಮಂಜೂರಾಗಿರುವ ಬೋಧಕ ಹುದ್ದೆಗಳು ಖಾಲಿ ಉಳಿದಿವೆ ಮತ್ತು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಬೋಧಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ಈ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರಕಾರಕ್ಕೆ ಸಾಕಷ್ಟು ಸಂಪನ್ಮೂಲಗಳಿಲ್ಲ. ಈ ವಿಷಯದಲ್ಲಿ ಕೇಂದ್ರವು ಮಧ್ಯಪ್ರವೇಶಿಸಬೇಕು” ಎಂದು ದೇವೇಗೌಡರು ಒತ್ತಾಯಿಸಿದರು.

ಶಿಕ್ಷಕರಾಗಿ ಕೆಲಸ ಮಾಡಿರುವ ತಮ್ಮ ಅನುಭವವನ್ನೂ ಸ್ಮರಿಸಿದ ಮಾಜಿ ಪ್ರಧಾನಿಗಳು; “ಶಿಕ್ಷಕನಾಗಿ ನನ್ನ ಸ್ವಂತ ಅನುಭವದಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಸ್ಥಿತಿಗತಿಗಳನ್ನು, ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದೇನೆ ಎಂದು ಹೇಳಿದ ದೇವೇಗೌಡರು, ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನಾನು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆಲೇ 1.56 ಲಕ್ಷ ಮಹಿಳಾ ಶಿಕ್ಷಕರನ್ನು ನೇಮಿಸಿದೆ” ಎಂದು ಅವರು ಹಿಂದಿನ ಸಂದರ್ಭವನ್ನು ನೆನಪಿಸಿಕೊಂಡರು.

ಈ ಕೂಡಲೇ ಕೇಂದ್ರದ ಉನ್ನತ ಶಿಕ್ಷಣ ಸಚಿವರು ಮೈಸೂರು ಮತ್ತು ಧಾರವಾಡ ವಿವಿಗಳ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments