ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಸ್ ಮುಖಂಡರ ವಿರುದ್ಧ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮೈಸೂರು ದಸರಾ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ.
ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿರುವ ಜಿ ಟಿ ದೇವೇಗೌಡ ನಡೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಜಿ ಟಿ ದೇವೇಗೌಡ ಅವರು ಮೈಸೂರಿನವರು. ಅವರು ತೊಂದರೆಗೆ ಸಿಗದೇ ಇರಲಿ ಅಂತ ಹೀಗೆ ಹೇಳಿರಬೇಕು” ಎಂದರು.
“ನನ್ನ ವಿರುದ್ಧ ಯಾರು ಏನೇ ಷಡ್ಯಂತ್ರ ಮಾಡಲಿ. ಏನೂ ಮಾಡಲು ಆಗುವುದಿಲ್ಲ. ನಾನು ಎಂದೂ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಎಂದು ಆಗ್ರಹಿಸಿಲ್ಲ. ಅವರ ನಿತ್ಯದ ಹೇಳಿಕೆ ನೋಡಿ ರಾಜೀನಾಮೆ ನೀಡಿದರೆ ಒಳ್ಳೆಯದು ಎಂದಿರುವೆ” ಎಂದು ಹೇಳಿದರು.
“ಎಫ್‌ಐಆರ್ ದಾಖಲಾದವರೆಲ್ಲ ರಾಜೀನಾಮೆ ನೀಡಬೇಕು ಅಂತ ನಾನು ಯಾವಾಗ ಹೇಳಿರುವೆ? ತಮ್ಮನ್ನು ರಕ್ಷಿಸಿಕೊಳ್ಳಲು ಜಿ ಟಿ ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ” ಎಂದು ದೂರಿದರು.
ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಮುಡಾ ಪ್ರಕರಣದಲ್ಲಿ ಯಾರೆಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆಯೋ ಎಲ್ಲರೂ ರಾಜೀನಾಮೆ ಕೊಡಲಿ. ಕುಮಾರಸ್ವಾಮಿ ಕೂಡ ರಾಜೀನಾಮೆ ನೀಡಲಿ” ಎಂದಿದ್ದರು.
“ಅವರೆಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ. ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕೆಂದು ವಾದಿಸುತ್ತಾ ಹೋದರೆ ರಾಜ್ಯದಲ್ಲಿ ಎಲ್ಲ ರಾಜಕೀಯ ನಾಯಕರೂ ರಾಜೀನಾಮೆ ನೀಡಬೇಕಾದೀತು. ಹಾಗೆ ಮಾಡಲು ಸಾಧ್ಯವೇ” ಎಂದು ಪ್ರಶ್ನಿಸಿದ್ದರು.