Homeಕರ್ನಾಟಕಗ್ರಾಮ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರಿಡಲಾಗುವುದು: ಡಿ ಕೆ ಶಿವಕುಮಾರ್

ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರಿಡಲಾಗುವುದು: ಡಿ ಕೆ ಶಿವಕುಮಾರ್

- ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ

ರಾಜ್ಯದಲ್ಲಿರುವ ಸುಮಾರು 6 ಸಾವಿರ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುವುದು. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ರಾಜಭವನ ಚಲೋ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಕೆಪಿಸಿಸಿ ಉಪಾಧ್ಯಕ್ಷರಾದ ಉಗ್ರಪ್ಪ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ವಿಚಾರವಾಗಿ ನಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯ್ತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ” ಎಂದು ತಿಳಿಸಿದರು.

“ಬಡ ಜನರ ಉದ್ಯೋಗದ ಹಕ್ಕಿನ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದ್ದು, ಸೋನಿಯಾ ಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಅವರ ಸರ್ಕಾರ. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5700 ಪಂಚಾಯ್ತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು” ಎಂದು ಹೇಳಿದರು.

“ಯಾವ ಕಾಮಗಾರಿ, ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಾಯ್ತಿಗಳು ತೀರ್ಮಾನ ಮಾಡುತ್ತಿದ್ದವು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶವನ್ನು ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕೇಂದ್ರ ಸಚಿವ ಸಿ.ಪಿ. ಜೋಷಿ ಅವರು ಈ ಯೋಜನೆ ರೂಪಿಸಿದ್ದರು. ಇಂತಹ ಐತಿಹಾಸಿಕ ತೀರ್ಮಾನವನ್ನು ಯುಪಿಎ ಸರ್ಕಾರ ತೆಗೆದುಕೊಂಡಿತ್ತು. ಆಶ್ರಯ ಮನೆ, ಇಂದಿರಾ ಆವಾಸ್ ಮನೆ ನಿರ್ಮಾಣ, ದನಗಳ ಕೊಟ್ಟಿಗೆ, ವ್ಯವಸಾಯ ಸಂಬಂಧಿ ಕೆಲಸ ಮಾಡಲು ಕೂಲಿ ನೀಡಲಾಗುತ್ತಿತ್ತು” ಎಂದು ವಿವರಿಸಿದರು.

“ಈ ಯೋಜನೆ ಆಂದೋಲನವಾಗಿ ನಡೆಯುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ 90% ಅನುದಾನ ನೀಡುತ್ತಿತ್ತು. ಕಬ್ಬಿಣ, ಸಿಮೆಂಟ್ ನಂತಹ ಸಾಮಾಗ್ರಿಗಳ ಬಳಕೆಯ ಕಾಮಗಾರಿಗಳಿದ್ದರೆ, ಅವುಗಳಿಗೆ ರಾಜ್ಯ ಸರ್ಕಾರ 25% ಅನುದಾನ ನೀಡಬೇಕಾಗಿತ್ತು. 7 ಸಾವಿರ ಜನ ಇದರ ಉಸ್ತುವಾರಿ ಜವಾಬ್ದಾರಿಯ ಉದ್ಯೋಗ ಸೃಷ್ಟಿಯಾಗಿದ್ದವು. ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಿಸಿ ಈ ಕಾಯ್ದೆಗೆ ಹೊಸ ರೂಪ ನೀಡಿದ್ದಾರೆ. ನೂತನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ 60%, ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. 2 ದಿನಗಳ ಕಾಲ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಜೆಪಿ ನಾಯಕರು ಏನು ಮಾತನಾಡುತ್ತಾರೆ ನೋಡೋಣ” ಎಂದರು.

ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ

“ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕನ್ನು ಕಳೆದುಕೊಂಡಿದ್ದೀರಿ. ಇನ್ನುಮುಂದೆ ನಿಮ್ಮ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್ ಡಿಎ ಸರ್ಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ. ಅವರ ಹೆಸರನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ತಿಳಿಸಿದರು.

“ಹಳ್ಳಿಗಳ ಉದ್ದಾರಕ್ಕೆ ನೀಡಿದ ಯೋಜನೆ ನರೇಗಾ. ಬಿಜೆಪಿಯಿಂದ ದೇಶಕ್ಕೆ ಹರಡುತ್ತಿದೆ ನಿರುದ್ಯೋಗದ ರೋಗ. ಬಿಜೆಪಿ ಗಾಂಧಿ ದ್ವೇಷಕ್ಕೆ ಧಿಕ್ಕಾರ. ನರೇಗಾ ರದ್ದಾಗಲು ಎಂದಿಗೂ ಬಿಡುವುದಿಲ್ಲ. ಬೇಡ ನಮಗೆ ವಿಬಿ ಗ್ರಾಮ್ ಜೀ. ಬೇಕೆ ಬೇಕು ನಮಗೆ ಗಾಂಧಿ. ಇವತ್ತು ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಹಿಂಜರಿಯುವುದಿಲ್ಲ, ಸರ್ಕಾರ ಇದ್ದರೂ ನಾವು ಜೈಲಿಗೆ ಹೋದರೂ ಸರಿ, ನರೇಗಾ ಯೋಜನೆ ಮರುಜಾರಿಗೆ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕರಾಳ ಕಾಯ್ದೆಯನ್ನು ಹಿಂಪಡೆದಂತೆ ಇದನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ” ಎಂದು ಸಂದೇಶ ಸಾರಿದರು.

“ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರೂ. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲ್ಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ. ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು” ಎಂದರು.

ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ

“ಕುಮಾರಸ್ವಾಮಿ, ಬಿಜೆಪಿ ನಾಯಕರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಈ ಯೋಜನೆ ಜಾರಿಯಾಗಿ 20 ವರ್ಷಗಳಿವೆ. ಕಳೆದ 11 ವರ್ಷಗಳಿಂದ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ನೀವು ಏನು ಮಾಡುತ್ತಿದ್ದಿರಿ? ನಮ್ಮ ಪಂಚಾಯ್ತಿಗಳಲ್ಲಿ ಅಕ್ರಮ ನಡೆದ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಯೋಜನೆಯನ್ನೇ ಬದಲಿಸುವುದೇ? ಆಮೂಲಕ ಮೂಗು ಕತ್ತರಿಸಿಕೊಳ್ಳುವ ಕೆಲಸ ಮಾಡುವುದು ಸರಿಯೇ?” ಎಂದು ಕಿಡಿಕಾರಿದರು.

“ಕೇಂದ್ರ ಬಿಜೆಪಿ ಸರ್ಕಾರ ನರೇಗಾ ಯೋಜನೆ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಎನ್ ಡಿಎ ಮೈತ್ರಿ ನಾಯಕ ಚಂದ್ರಬಾಬು ನಾಯ್ಡು ಅವರೇ ಈ ಯೋಜನೆಗೆ ಅಪಸ್ವರ ಎತ್ತಿದ್ದು, ಇದನ್ನು ಜಾರಿ ಸಾಧ್ಯವಿಲ್ಲ ಎಂದಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ನೂತನ ಕಾಯ್ದೆ ಹಿಂಪಡೆಯದಿದ್ದರೆ ಸರ್ಕಾರಕ್ಕೆ ಆಪತ್ತು ಎದುರಾಗಲಿದೆ. ಚಂದ್ರಬಾಬು ನಾಯ್ಡು ಅವರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ” ಎಂದರು.

“ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಹಕ್ಕು, ಪಂಚಾಯ್ತಿ ಅಧಿಕಾರ ಕಸಿಯುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯ್ತಿಯಲ್ಲಿ ನರೇಗಾ ಕಾರ್ಮಿಕರನ್ನು ಒಳಗೊಂಡು ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments