ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಈಗ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ಕಾಂಗ್ರೆಸ್ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶ ಮತ್ತು ಚುನಾವಣಾ ಸಂಬಂಧದ ಸಭೆ ಹಾಗೂ ಬಂಗಾರಪೇಟೆ ಕ್ಷೇತ್ರದ ಅಂಚಾಳ ಗ್ರಾಮದಲ್ಲಿ ನಡೆದ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.
“ನರೇಂದ್ರ ಮೋದಿ ಪ್ರಧಾನಿಯಾದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಜನರ ಪರವಾಗಿ ದನಿ ಎತ್ತಿದ್ದರು. ಅಂತಹ ಮಹಾನ್ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರರು ಲೋಕಸಭೆಗೆ ಹೋಗಲು ಚುನಾವಣೆಗೆ ನಿಂತಾಗ ಅವರನ್ನು ಕಾಂಗ್ರೆಸ್ ಹೀನಾಯವಾಗಿ ಸೋಲಿಸಿತ್ತು. ಅಂದಿನ ಪ್ರಧಾನಿ ನೆಹರೂ ಅಂಬೇಡ್ಕರರನ್ನು ಸೋಲಿಸುವ ಕರೆ ನೀಡಿದ್ದರು” ಎಂದರು.
“ಅಂಬೇಡ್ಕರರು ತೀರಿಕೊಂಡಾಗ ಸ್ಮಾರಕ ನಿರ್ಮಿಸಲು ಕೂಡ ಕಾಂಗ್ರೆಸ್ ಜಾಗ ಕೊಡಲಿಲ್ಲ. ಇಷ್ಟೆಲ್ಲ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ದಲಿತರು ಮತ ನೀಡಬೇಕೆ? ಎಂದು ಆಲೋಚಿಸಬೇಕು. ಪ್ರಧಾನಿ ಮೋದಿ ಅಂಬೇಡ್ಕರ್ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಅವರಿಗೆ ದಲಿತರು ಮತ ನೀಡಬೇಕು” ಎಂದು ವಿನಂತಿಸಿದರು.
“ಪಾಕಿಸ್ತಾನ ಅನೇಕ ಬಾರಿ ದೇಶದ ಮೇಲೆ ದಾಳಿ ಮಾಡಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನವರೇ ಕರೆದುಕೊಂಡು ಬಂದವರು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದರು. ಇಂತಹವರಿಗೆ ಶಿಕ್ಷೆ ನೀಡದೆ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ. ಸಿಎಂ ಸಿದ್ದರಾಮಯ್ಯನವರು ಆಗಾಗ್ಗೆ ಅನ್ನಭಾಗ್ಯ ಎಂದು ಹೇಳುತ್ತಾರೆ. ಆದರೆ ಅದು ನಿಜವಾಗಿಯೂ ಮೋದಿ ಭಾಗ್ಯವಾಗಿದೆ. ಇವರದ್ದು ಕನ್ನ ಭಾಗ್ಯ” ಎಂದು ಟೀಕಿಸಿದರು.
“ಬರ ಪರಿಹಾರವನ್ನು ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಸಿಎಂ ಸಿದ್ದರಾಮಯ್ಯ ಕೈ ತೋರಿಸುತ್ತಾರೆ. ಈ ಚುನಾವಣೆ ಮುಗಿದ ನಂತರ ನೌಕರರಿಗೆ ಸಂಬಳ ಕೊಡಲು ಕೂಡ ಸರ್ಕಾರದ ಬಳಿ ಹಣವಿರುವುದಿಲ್ಲ” ಎಂದರು.
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ತಂದೆ ಐಎಎಸ್ ಅಧಿಕಾರಿಯಾಗಿ ದಲಿತರಿಗೆ ಸಹಾಯ ಮಾಡಿದ್ದಾರೆ. ವಿದ್ಯಾವಂತ ಯುವಕ ಮಲ್ಲೇಶ್ ಅವರಿಗೆ ಎಲ್ಲರೂ ಬೆಂಬಲಿಸಬೇಕು. ಹಿಂದಿನ ಸಂಸದ ಮುನಿಸ್ವಾಮಿ ಅವರ ಹೆಸರನ್ನು ಹಿಂದೆ ನಾನೇ ಶಿಫಾರಸು ಮಾಡಿದ್ದೆ. ಆಗಲೂ ಎಲ್ಲರೂ ಅಪಾರ ಬೆಂಬಲ ನೀಡಿದ್ದರು. ಈಗಲೂ ಅದೇ ರೀತಿ ಬೆಂಬಲ ನೀಡಬೇಕು” ಎಂದು ಕೋರಿದರು.