ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.
ಸವದತ್ತಿಯ ಯಲ್ಲಮ್ಮ ದೇವಸ್ಥಾನವನ್ನು ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ತರಲಾಗಿದೆ. ಅನುದಾನ ಬಳಸಿಕೊಂಡು ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಸಮಗ್ರ ಅಭಿವೃದ್ಧಿ ಮಾಡಬಹುದಾಗಿದೆ ಪ್ರತ್ಯೇಕ ಪ್ರಾಧಿಕಾರದ ರಚನೆಯ ಅಗತ್ಯ ಇಲ್ಲ ಎಂದು ಹೇಳಿದ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿ ವಾಪಸ್ ಕಳುಹಿಸಿದ್ದರು.
ಇದಾದ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಶ್ರೀಕ್ಷೇತ್ರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಪ್ರತ್ಯೇಕ ಪ್ರಾಧಿಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸರ್ಕಾರದ ಈ ಸ್ಪಷ್ಟನೆಗೆ ಸಮ್ಮತಿ ವ್ಯಕ್ತಪಡಿಸಿರುವ ರಾಜ್ಯಪಾಲರು ಇದೀಗ ಮಸೂದೆಗೆ ಅಂಕಿತ ಹಾಕಿದ್ದಾರೆ. ಈಗ ಇದನ್ನು ಅಧಿಸೂಚನೆ ಮೂಲಕ ಪ್ರಕಟಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ.
ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರವು ‘ಎ’ ವರ್ಗದ ದೇವಸ್ಥಾನವಾಗಿದೆ. ಒಟ್ಟು 88. 37 ಎಕರೆ ವಿಸ್ತೀರ್ಣವನ್ನು ಈ ದೇವಾಲಯ ಹೊಂದಿದೆ.
ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧಿನಿಯಮ ಮತ್ತು ಉದ್ದೇಶಿತ ಪ್ರಾಧಿಕಾರದೊಂದಿಗೆ ಮಾಸ್ಟರ್ ಪ್ಲಾನ್ ತಿದ್ದಪಡಿಸಿ ಅದರ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಲಾಗುತ್ತದೆ.
ಅಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಭಕ್ತಾಧಿಗಳಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವನ್ನಾಗಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು. ರಸ್ತೆ, ಕುಡಿಯುವ ನೀರು, ಗ್ರಾಮ ನೈರ್ಮಲ್ಯಗಳಂತಹ ಮೂಲಸೌಕರ್ಯ ಅಭಿವೃದ್ಧಿ. ಸಮರ್ಪಕವಾಗಿ ಭಕ್ತಾಧಿಗಳಿಗೆ ವಸತಿ, ದರ್ಶನ, ಪ್ರಸಾದ ವಿನಿಯೋಗ ಸೌಲಭ್ಯ ಒದಗಿಸುವುದು. ದೇವಸ್ಥಾನದ ಆದಾಯ ವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.
ಅನುಮೋದನೆ:
ಇದರ ಜೊತೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸುವುದು ಸೇರಿದಂತೆ ಕೆಲವಾರು ಕ್ರಮಗಳನ್ನು ಅಡಕ ಮಾಡಿ ರವಾನಿಸಲಾಗಿದ್ದ ಕರ್ನಾಟಕ ಮುನಿಸಿಪಲ್ ಕಾಯ್ದೆ ತಿದ್ದುಪಡಿ ಮಸೂದೆಗೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದಲ್ಲದೆ ಸರ್ಕಾರದ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ರೂಪಿಸಲಾಗಿರುವ ಕಾಯಿದೆಗೂ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.