ಆಗಸ್ಟ್ ತಿಂಗಳಲ್ಲಿ ಎರಡು ವಾರಗಳ ಕಾಲ ನಡೆದ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡವೆಯೂ ಒಟ್ಟು 39 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, 32 ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ನೀಡಿದ್ದಾರೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಹೆಚ್ ಕೆ ಪಾಟೀಲ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಒಟ್ಟು 39 ಮಸೂದೆಗಳನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ. 39 ಮಸೂದೆಗಳಲ್ಲಿ 2 ಮಸೂದೆಗಳನ್ನು ಜಂಟಿ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾದ 37 ಮಸೂದೆಗಳಲ್ಲಿ, 32 ಮಸೂದೆಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ. ಅವುಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.
3 ಮಸೂದೆಗಳನ್ನು ಕೇಂದ್ರ ಸರ್ಕಾರದ ಕಾನೂನುಗಳಿಗೆ ತಿದ್ದುಪಡಿಯಾಗಿರುವುದರಿಂದ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಿದ್ದಾರೆ. 1 ಮಸೂದೆ ರಾಜ್ಯಪಾಲರ ಬಳಿ ಬಾಕಿ ಇದೆ ಮತ್ತು 1 ಮಸೂದೆಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತಿದೆ. ಒಂದೇ ದಿನದಲ್ಲಿ 15 ಮಸೂದೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವುದು ದಾಖಲೆಯಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.