ಬಿಜೆಪಿಯ ಶಾಸಕರುಗಳ ಮಾತುಕೇಳಿ 15 ಬಿಲ್ಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ವಾಪಸ್ ಕಳುಹಿಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಬಿಜೆಪಿಯವರ ಮಾತನ್ನೇ ಕೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಏಕಿರಬೇಕು. ಏನಾದರು ಸ್ಪಷ್ಟನೆ ಕೇಳಿದರೆ ನೀಡೋಣ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ರಾಜ್ಯಪಾಲರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದರು.
ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕೇಳಿದಾಗ, “ಸರ್ಕಾರ ಬೀಳಿಸಲು ಯಾವ ಪ್ರಯತ್ನ ಮಾಡಿದರೂ ಏನು ಆಗುವುದಿಲ್ಲ. ನಾವೂ ಸಹ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
ಜಿಂದಾಲ್ಗೆ ಭೂಮಿ ಮಾರಾಟ ಮಾಡಿದ್ದನ್ನು ಈ ಹಿಂದೆ ವಿರೋಧಿಸಿದ್ದ ಕಾಂಗ್ರೆಸ್ ಅದೇ ಜಿಂದಾಲ್ಗೆ ಭೂಮಿ ಮಾರಾಟ ಮಾಡಿದೆ ಎಂದು ಕೇಳಿದಾಗ, “ಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು. ಕರ್ನಾಟಕದಲ್ಲಿ ಇರುವ ಕೈಗಾರಿಕಾ ಕಾನೂನಿಗೆ ತಕ್ಕಂತೆ ಅವರಿಗೆ ಭೂಮಿ ನೀಡಿದ್ದೇವೆ. ನಾವು ಅವರಿಗೆ ಹೊಸದಾಗಿ ಭೂಮಿ ಕೊಟ್ಟಿಲ್ಲ. ಈ ಹಿಂದೆ ಕೊಟ್ಟಿದ್ದನ್ನೇ ಪರಿಶೀಲಿಸಿ ಸೇಲ್ ಡೀಡ್ ಮಾಡಿಕೊಟ್ಟಿದ್ದೇವೆ. ಸಾವಿರಾರು ಲಕ್ಷಾಂತರ ಜನ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತೆ ಇಲ್ಲಿಯೂ ಅದನ್ನೇ ಮಾಡಲಾಗಿದೆ. ಬಿಜೆಪಿಯವರು ಮಾಡಿದ್ದನ್ನು ನಾವು ಸರಿ ಮಾಡಿಕೊಟ್ಟಿದ್ದೇವೆ” ಎಂದು ತಿಳಿಸಿದರು.
ಸಚಿವ ಪರಮೇಶ್ವರ್ ಅವರು ಸಹ ದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ, “ಬರುವವರನ್ನು ಬೇಡ ಎನ್ನಲು ಆಗುತ್ತದೆಯೇ? ಅವರದೇ ಇಲಾಖೆ ಕೆಲಸ, ಪಕ್ಷದ ಕೆಲಸ ಇರುತ್ತದೆ. ನಮಗೂ ಸಹ ಎರಡೂ ಕೆಲಸಗಳಿದ್ದು. ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ” ಎಂದು ಹೇಳಿದರು.
ರಾಜ್ಯ ಸರ್ಕಾರದೊಂದಿಗೆ ಸಂಘರ್ಷ
ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಇದೀಗ ರಾಜ್ಯ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ.
ರಾಜ್ಯ ಸರ್ಕಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದಿಸಿ ಅಂಕಿತ ಹಾಕಲು ಕಳುಹಿಸಿದ್ದ 11 ಮಸೂದೆಗಳಿಗೆ ಸಹಿ ಹಾಕಲು ನಿರಾಕರಿಸಿ ವಿವಿಧ ರೀತಿಯ ಸ್ಪಷ್ಟನೆಗಳನ್ನು ಕೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರ ವರ್ಷಗಳ ನಂತರದಲ್ಲಿ ಇದೆ ಮೊದಲ ಬಾರಿಗೆ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ.
ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟುವಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆದಾಯ ಆದಾಯ ಹೆಚ್ಚಳಕ್ಕೆ ಅವಕಾಶ ಉಪನೋಂದಣಿ ಕಚೇರಿಗಳಲ್ಲಿ ಜನ ದಟ್ಟಣೆ ಕಡಿಮೆ ಮಾಡಲು ಇ- ನೊಂದಣಿಗೆ ಅವಕಾಶ ನೀಡುವ ಮಸೂದೆಗಳನ್ನು ಕೂಡ ವಾಪಸ್ ಕಳುಹಿಸಿರುವುದು ಅಚ್ಚರಿ ಮೂಡಿಸಿದೆ.
ರಾಜ್ಯಪಾಲರು ಒಟ್ಟಾರೆಯಾಗಿ 11 ಮಸೂದೆಗಳನ್ನು ಸ್ಪಷ್ಟನೆ ಕೇಳಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ರಾಜ್ಯಪಾಲರು ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ, 2023,
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ,
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ, 2024
ಉಪ-ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಸರ್ಕಾರವು ಇ-ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ, 2024
ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ, 2024
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2024
ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣಾ) (ತಿದ್ದುಪಡಿ) ಮಸೂದೆ 2024
ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2024