ಅನ್ನಭಾಗ್ಯ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್‌ಎಫ್‌ಎಸ್‌ಎ) ಯೋಜನೆಗಳ ಪಡಿತರ ಸಾಗಿಸಿದ್ದಕ್ಕಾಗಿ ಪಾವತಿ ಮಾಡಬೇಕಿದ್ದ ಹಣವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಹಾರ ಧಾನ್ಯ ಸಾಗಣೆ ವೆಚ್ಚದ ಬಿಲ್ ಐದು ತಿಂಗಳಿನಿಂದ ಪಾವತಿ ಮಾಡದೇ ಇರುವುದನ್ನು ಖಂಡಿಸಿ, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘವು ಆಹಾರಧಾನ್ಯ ಪೂರೈಕೆಯನ್ನು ಸೋಮವಾರದಿಂದ ಸ್ಥಗಿತಗೊಳಿಸಿತ್ತು.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಪಡಿತರ ಸಾಗಿಸಿದ್ದಕ್ಕಾಗಿ ಪಾವತಿ ಮಾಡಬೇಕಿದ್ದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಫೆಬ್ರವರಿ, ಮಾರ್ಚ್, ಏಪ್ರೀಲ್ ಹಾಗೂ ಮೇ-2025ರ ಮಾಹೆಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಗಾಗಿ ಮತ್ತು ಇತರ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಉಂಟಾಗುವ ವೆಚ್ಚವನ್ನು ಭರಿಸಲು 2082.99ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಫೆಬ್ರುವರಿಯಿಂದ ಜೂನ್‌ವರೆಗೆ ‘ಅನ್ನಭಾಗ್ಯ ಯೋಜನೆ’ ಹಾಗೂ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಎನ್‌ಎಫ್‌ಎಸ್ಎ ಯೋಜನೆಯಡಿಯಲ್ಲಿ ಆಹಾರ ಧಾನ್ಯ ಸಾಗಣೆಗೆ ಮಾಡಿರುವ ವೆಚ್ಚವನ್ನು ಸರ್ಕಾರ ಪಾವತಿ ಮಾಡಿಲ್ಲ. ಹೀಗಾದರೆ ಗುತ್ತಿಗೆ ಪಡೆದಿರುವ ಲಾರಿ ಮಾಲೀಕರು ಬದುಕುವುದು ಹೇಗೆ” ಎಂದು ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಪ್ರಶ್ನಿಸಿದ್ದರು.