Homeಕರ್ನಾಟಕಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಸ್ಮಶಾನ ಭೂಮಿ ಖರೀದಿಗೆ ಸರ್ಕಾರ ಸಿದ್ದ:...

ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಸ್ಮಶಾನ ಭೂಮಿ ಖರೀದಿಗೆ ಸರ್ಕಾರ ಸಿದ್ದ: ಕೃಷ್ಣ ಬೈರೇಗೌಡ

• ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಯೇ ಇಲ್ಲ
• ಸದನದಲ್ಲಿ ಬೇಸರ ವ್ಯಕ್ತಪಡಿಸಿದರ ಸಚಿವರು
• ಸ್ಮಶಾನ ಭೂ ಖರೀದಿಗೆ 3 ವರ್ಷದಲ್ಲಿ ರೂ.58 ಕೋಟಿ ಖರ್ಚು

ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂ ಮಂಜೂರಿಗೆ ಸರ್ಕಾರಿ ಜಮೀನು ಇಲ್ಲದಿದ್ದರೆ, ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಹಣ ನೀಡಿ ಖಾಸಗಿ ಜಮೀನು ಖರೀದಿಗೆ ಸರ್ಕಾರ ಸಿದ್ದ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವ್ಹಾಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, “ಕಳೆದ 70 ವರ್ಷಗಳಿಂದ ಎಲ್ಲಾ ಸರ್ಕಾರಗಳೂ ಇರುವ ಭೂಮಿಯನ್ನೆಲ್ಲಾ ರೈತರಿಗೆ ಹಾಗೂ ವಿವಿಧ ಜನಪರ ಯೋಜನೆಗಳಿಗೆ ಮಂಜೂರು ಮಾಡಿದ್ದು, ಪ್ರಸ್ತುತ ಸ್ಮಶಾನಕ್ಕೂ ಭೂಮಿ ಇಲ್ಲದಂತಾಗಿದೆ” ಎಂದು ಬೇಸರ ಹೊರಹಾಕಿದರು.

“ಕಳೆದ ಹತ್ತು ವರ್ಷಗಳಿಂದ ಎಲ್ಲಾ ಸರ್ಕಾರಗಳೂ ವಸತಿ ಪ್ರದೇಶಗಳಿಗೆ ಅವಶ್ಯ ಇರುವಷ್ಟು ಸ್ಮಶಾನ ಭೂಮಿ ನೀಡಬೇಕು ಎಂದು ಪ್ರಯತ್ನಿಸಿದೆ. ಈ ವಿಚಾರದಲ್ಲಿ ಹೈಕೋರ್ಟ್ ಸಹ ಸರ್ಕಾರದ ಬೆನ್ನುಹತ್ತಿದೆ. ಸರ್ಕಾರಿ ಜಮೀನು ಇದ್ದಲ್ಲಿ ಆ ಭೂಮಿಯನ್ನೇ ಸ್ಮಶಾನಕ್ಕೆ ಕಾಯ್ದಿರಿಸಲಾಗಿದೆ. ಸರ್ಕಾರಿ ಜಮೀನು ಇಲ್ಲದಿದ್ದ ಭಾಗಗಳಲ್ಲಿ ಸ್ಮಶಾನ ಭೂಮಿ ನೀಡುವ ಸಲುವಾಗಿ ಕಳೆದ 3 ವರ್ಷದಲ್ಲಿ 58 ಕೋಟಿ ರೂ. ಕೊಟ್ಟು ಭೂಮಿಯನ್ನು ಖರೀದಿ ಮಾಡುವ ಹಂತಕ್ಕೆ ಬಂದು ನಿಂತಿದ್ದೇವೆ” ಎಂದು ವಿಷಾದಿಸಿದರು.

ಔರಾದ್ ತಾಲೂಕಿನ ಪರಿಸ್ಥಿತಿ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡಿದ ಅವರು,” ಔರಾದ್ ತಾಲೂಕಿನ 154 ವಸತಿ ಪ್ರದೇಶಗಳ ಪೈಕಿ 9 ಪ್ರದೇಶಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಈ 9 ಗ್ರಾಮಗಳ ಪೈಕಿ 2 ಗ್ರಾಮಗಳಿಗೆ ಆ ಗ್ರಾಮದ ಮಿತಿಯಲ್ಲೇ ಸರ್ಕಾರಿ ಭೂಮಿ ಲಭ್ಯ ಇದ್ದು, ಇನ್ನೂ ಒಂದು ವಾರದಲ್ಲಿ ಸ್ಮಶಾನ ಭೂಮಿಗೆ ಕಾಯ್ದಿರಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಇನ್ನೂ 7 ವಸತಿ ಪ್ರದೇಶಗಳಿಗೆ ಪಕ್ಕದ ಗ್ರಾಮದಲ್ಲಿ ಭೂಮಿ ಇದ್ದು, ಅದನ್ನು 15 ದಿನಗಳ ಒಳಗೆ ಕಾಯ್ದಿರಿಸಲು ಸೂಚಿಸಲಾಗಿದೆ.

ಒಂದು ವೇಳೆ ಆ ಜಾಗ ಸೂಕ್ತ ಅಲ್ಲ ಅಂತ ಗೊತ್ತಾದ್ರೆ ಖಾಸಗಿ ಜಮೀನನ್ನು ಖರೀದಿಸಲು ಸಹ ಪ್ರಸ್ತಾವನೆ ಸಿದ್ದವಾಗಿದೆ. ಖಾಸಗಿ ಜಮೀನುಗಳಿಗೆ ಮಾರ್ಗಸೂಚಿ ದರಕ್ಕಿಂತ ಮೂರು ಪಟ್ಟು ಅಧಿಕ ಹಣ ನೀಡಲೂ ಸರ್ಕಾರ ಮುಂದಾಗಿದೆ. ಇನ್ನೂ ಕಾಂಪೌಂಡ್ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನೂ ನರೇಗಾ ಅಡಿಯಲ್ಲಿ ಗ್ರಾಮ ಪಂಚಾಯತ್ ಮಾಡಿಕೊಡುತ್ತಾರೆ. ಈ ಸಂಬಂಧ ಗ್ರಾಮ ಪಂಚಾಯತ್ ಸಿಇಓ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments