Homeಕರ್ನಾಟಕವಿದ್ಯುತ್ ಬೇಡಿಕೆ ಪೂರೈಸಲು ಸರ್ಕಾರ ಸಿದ್ಧ; ಪಂಜಾಬ್, ಉತ್ತರ ಪ್ರದೇಶದಿಂದ ವಿದ್ಯುತ್‌ ಖರೀದಿ: ಸಚಿವ ಕೆ...

ವಿದ್ಯುತ್ ಬೇಡಿಕೆ ಪೂರೈಸಲು ಸರ್ಕಾರ ಸಿದ್ಧ; ಪಂಜಾಬ್, ಉತ್ತರ ಪ್ರದೇಶದಿಂದ ವಿದ್ಯುತ್‌ ಖರೀದಿ: ಸಚಿವ ಕೆ ಜೆ ಜಾರ್ಜ್

ತೀವ್ರ ಬರದ ನಡುವೆಯೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ‌ ಸಾಧ್ಯವಿರುವ ಎಲ್ಲ ಕ್ರಮ ಕೈಗೊಂಡಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದರು.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ರಾಜ್ಯ ವಿದ್ಯುತ್ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಮಳೆಯ ಕೊರತೆ ನಡುವೆ ಈ ವರ್ಷ ಒನ್​ ಟು ಡಬಲ್ ಇಂಧನಕ್ಕೆ ಬೇಡಿಕೆ ಜಾಸ್ತಿಯಾಗಿದೆ” ಎಂದರು.

“ನಮಗೆ ಮುಖ್ಯಮಂತ್ರಿಗಳು ಸಾಕಷ್ಟು ಬೆಂಬಲ ನೀಡಿದ್ದಾರೆ. ವಿದ್ಯುತ್ ಖರೀದಿ‌ ಮಾಡಲು ಹಣಬಿಡುಗಡೆ ಮಾಡಿದ್ದಾರೆ. ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ವಿದ್ಯುತ್ ಖರೀದಿಗೆ ಮುಂದಾಗುತ್ತಿದ್ದೇವೆ. ಪಂಜಾಬ್ (300 ಮೆ.ವ್ಯಾ) ಮತ್ತು ಉತ್ತರ ಪ್ರದೇಶದಿಂದ (100-600ಮೆ.ವ್ಯಾ.) ವಿದ್ಯುತ್ ಖರೀದಿಸಲು ತೀರ್ಮಾನಿಸಲಾಗಿದೆ” ಎಂದು ಹೇಳಿದರು.

“ಸದ್ಯದ ಅಂಕಿ ಅಂಶದ ಪ್ರಕಾರ ರಾಜ್ಯದ ದೈನಂದಿನ ಬಳಕೆಗೆ ವಿದ್ಯುತ್ ಬೇಡಿಕೆ ಸುಮಾರು 14,000 ಮೆ.ವ್ಯಾ ಮತ್ತು ನೀರಾವರಿ ಪಂಪ್‌ಸೆಟ್ ಸೆಟ್​ಗಳಿಗೆ 4,500 ಮೆ.ವ್ಯಾ ವಿದ್ಯುತ್ ಅಗತ್ಯವಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಳದ ಜತೆಗೆ ಸೆಕ್ಷನ್ 11 ಜಾರಿ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಮತ್ತು ಇಂಧನ ಮಾರುಕಟ್ಟೆಯಿಂದ ಖರೀದಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ನೀರಾವರಿ ಪಂಪ್‌ಸೆಟ್​ಗಳಿಗೆ 7 ತಾಸು ವಿದ್ಯುತ್ ಪೂರೈಸುವಂತೆ ಸೂಚನೆ ನೀಡಿದ್ದಾರೆ” ಎಂದು ಹೇಳಿದರು.

ಬೇಸಿಗೆ ಎದುರಿಸಲು ಇಂಧನ ಇಲಾಖೆ ಸಿದ್ಧತೆ

“ಸದ್ಯ ವಿದ್ಯುತ್ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲಾಗುತ್ತಿದೆ. 2024ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15,500 ಮೆ.ವ್ಯಾ ನಿಂದ 16,500 ಮೆ.ವ್ಯಾ ತಲುಪುವ ನಿರೀಕ್ಷೆಯಿದೆ. ಬೇಸಿಗೆಯಲ್ಲಿ ಯಾರಿಗೂ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ” ಎಂದರು.

ಉಷ್ಣ ವಿದ್ಯುತ್ ಉತ್ಪಾದನೆ

“ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು. ಎಒಹೆಚ್ ಜನರೇಟರ್‌ಗಳನ್ನು ಪುನಾರಂಭಿಸಲಾಗುವುದು. ಕೆಪಿಸಿಎಲ್‌ನ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಯನ್ನು 3500 ಮೆ.ವ್ಯಾವರೆಗೆ ಹೆಚ್ಚಿಸುವುದು. 370 ಮೆ.ವ್ಯಾ. ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರ ಉತ್ಪಾದನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ವಿವರಿಸಿದರು.

2 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಲಭ್ಯ

“ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ 2023ರ ಅಕ್ಟೋಬರ್‌ನಿಂದ ತಿಂಗಳಿಗೆ 2 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ಕಲ್ಲಿದ್ದಲು ಲಭ್ಯವಾಗುತ್ತಿದೆ. 2023ರ ಡಿಸೆಂಬರ್ 1ರಿಂದ ಕೂಡಿಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ 150 ಮೆ ವ್ಯಾ ಉತ್ಪಾದನೆ ಪುನಾರಂಭಿಸಲಾಗುವುದು. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶಿಯ ಕಲ್ಲಿದ್ದಲಿನೊಂದಿಗೆ ಅಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು” ಎಂದು ತಿಳಿಸಿದರು.

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಬಾಕಿ ಮನ್ನಾ

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ 2.64 ಲಕ್ಷ ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಶುಲ್ಕ 389.66 ಕೋಟಿ ರೂ. ಮನ್ನಾ ಮಾಡಿ, ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ ಗೃಹ ಜ್ಯೋತಿಯ ಲಾಭ ಪಡೆಯಲು ಇದ್ದ ತೊಡಕನ್ನು ನಿವಾರಿಸಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ಬಳಸಲು ಈ ಮೂಲಕ ಅನುಕೂಲ ಮಾಡಿಕೊಡಲಾಗಿದೆ” ಎಂದು ಮಾಹಿತಿ ನೀಡಿದರು.

ಕಾಫಿ ಬೆಳೆಗಾರರ ಪಂಪ್‌ಸೆಟ್‌ ಬಡ್ಡಿ ಬಾಕಿ ಮನ್ನಾ

ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್ ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್‌ ಅಸಲು 47.7 ಕೋಟಿ ರೂ. ಮತ್ತು ಬಡ್ಡಿ 16.47 ಕೋಟಿ ರೂ. ಸೇರಿ ಒಟ್ಟು 64.24 ಕೋಟಿ ರೂ. ವರೆಗೆ 2023ರ ಸೆಪ್ಟೆಂಬರ್‌ 30ರ ವರೆಗೆ ಬಾಕಿ ಉಳಿದಿದೆ. ರೈತರು ಅಸಲು ಮೊತ್ತ ಪಾವತಿಸಿದ ನಂತರ ಸಂಚಿತ ಬಡ್ಡಿಯನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments