Homeಕರ್ನಾಟಕಸರ್ಕಾರಿ ಆಸ್ಪತ್ರೆಗಳಲ್ಲಿ ಸಮಗ್ರ ಸಮಾಲೋಚನಾ ಕೇಂದ್ರ ಸ್ಥಾಪನೆಗೆ ಸರ್ಕಾರ ಆದೇಶ

ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಗ್ರ ಸಮಾಲೋಚನಾ ಕೇಂದ್ರ ಸ್ಥಾಪನೆಗೆ ಸರ್ಕಾರ ಆದೇಶ

ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ (RKSK) ಅಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ‘ಸ್ನೇಹ ಕೇಂದ್ರ’ಗಳನ್ನು ರಾಜ್ಯದಾದ್ಯಂತ ವಿಸ್ತರಿಸುವುದರ ಜೊತೆಗೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಸಮಗ್ರ ಸಮಾಲೋಚನಾ ಕೇಂದ್ರ’ (SSK)ಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ.

2015-16ರಿಂದ ಜಾರಿಯಲ್ಲಿರುವ RKSK ಯೋಜನೆಯಡಿ 10 ರಿಂದ 19 ವರ್ಷದ ಹದಿಹರೆಯದವರಿಗೆ ಸಮಾಲೋಚನೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಆದರೆ ರಾಜ್ಯದ 14 ಜಿಲ್ಲೆಗಳಲ್ಲಿ ಇನ್ನೂ ಸ್ನೇಹ ಕೇಂದ್ರಗಳಿಲ್ಲ. ಕೆಲವೆಡೆ ಕೇಂದ್ರಗಳಿದ್ದರೂ ಸಮಾಲೋಚಕರುಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ, ಲಭ್ಯವಿರುವ ವೈದ್ಯಾಧಿಕಾರಿಗಳು, ಶುಶೂಷಕರು ಮತ್ತು ಇತರ ಸಿಬ್ಬಂದಿಗೆ ತರಬೇತಿ ನೀಡಿ, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸ್ನೇಹ ಕೇಂದ್ರಗಳನ್ನು ಕಾರ್ಯಗತಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹೊಸ ಆದೇಶದಡಿ, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ SSKಗಳನ್ನು ಸ್ಥಾಪಿಸಲಾಗುವುದು. KSAPS, ಮಾನಸಿಕ ಆರೋಗ್ಯ, RKSK, NTEP, NCD ಮುಂತಾದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ನಿಯೋಜಿಸಲಾದ ಸಮಾಲೋಚಕರುಗಳು ಇನ್ನು ಮುಂದೆ ತಮ್ಮ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ, ಎಲ್ಲಾ ಫಲಾನುಭವಿಗಳಿಗೆ ಸಮಗ್ರ ಸಮಾಲೋಚನೆ ಸೇವೆಗಳನ್ನು ಒದಗಿಸಬೇಕಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಗೌಪ್ಯತೆಯನ್ನು ಕಾಪಾಡುವಂತೆ ಪ್ರತ್ಯೇಕ ಸ್ಥಳಾವಕಾಶ, ಅಗತ್ಯ ಪರಿಕರಗಳು ಮತ್ತು ಡಿಜಿಟಲ್ ಬೆಂಬಲ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಸಮಾಲೋಚಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ RCH ಅಧಿಕಾರಿಗಳು ಮತ್ತು ರಾಜ್ಯಮಟ್ಟದಲ್ಲಿ ಉಪ ನಿರ್ದೇಶಕರು ಮೇಲ್ವಿಚಾರಣೆ ನಡೆಸಲಿದ್ದಾರೆ.

ಸಮುದಾಯ ಕ್ಷೇತ್ರ ಭೇಟಿಗಳನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಏಕೀಕರಿಸುವ ಮೂಲಕ, ಶಾಲಾ ಭೇಟಿಗಳು ಮತ್ತು ಸಮುದಾಯ ಚಟುವಟಿಕೆಗಳನ್ನು ಒಟ್ಟುಗೂಡಿಸಲಾಗುವುದು. RKSK ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾದ ಸಂಪನ್ಮೂಲ ಸಾಮಗ್ರಿಗಳನ್ನು ಶಿಕ್ಷಣ ಇಲಾಖೆಯ ಪಠ್ಯಕ್ರಮದೊಂದಿಗೆ ಹೊಂದಿಸಿ, ವಿದ್ಯಾರ್ಥಿಗಳಿಗೆ ಸಮಗ್ರ ಆರೋಗ್ಯ ಅರಿವು ನೀಡುವ ವ್ಯವಸ್ಥೆ ರೂಪಿಸಲಾಗುತ್ತದೆ.

ಹೆಚ್ಚಿನ ಸೇವೆಗಳ ಅಗತ್ಯವಿರುವ ಮಕ್ಕಳಿಗೆ ಪ್ರತಿ ತಿಂಗಳು 13ರಂದು ವಿಶೇಷ OPD ದಿನವನ್ನು ನಿಗದಿಪಡಿಸಿ, ಮಕ್ಕಳ ವೈದ್ಯರು, ಮನೋವೈದ್ಯರು, ಮೂಳೆ ತಜ್ಞರು ಮುಂತಾದವರಿಂದ ಸಮಾಲೋಚನೆ ಒದಗಿಸಲಾಗುವುದು.

ಈ ಆದೇಶದ ಮೂಲಕ, ಹದಿಹರೆಯದವರ ಆರೋಗ್ಯ ಸೇವೆಗಳನ್ನು ಬಲಪಡಿಸುವುದರ ಜೊತೆಗೆ, ಲಭ್ಯವಿರುವ ಮಾನವ ಸಂಪನ್ಮೂಲಗಳ ಸಮಗ್ರ ಬಳಕೆ ಸಾಧ್ಯವಾಗಲಿದೆ. ರಾಜ್ಯದಾದ್ಯಂತ ಸಮಾಲೋಚನಾ ಸೇವೆಗಳ ಏಕೀಕರಣದಿಂದ, ಮಕ್ಕಳ ಮತ್ತು ಹದಿಹರೆಯದವರ ಆರೋಗ್ಯದತ್ತ ಸರ್ಕಾರದ ಬದ್ಧತೆ ಮತ್ತಷ್ಟು ಸ್ಪಷ್ಟವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments