ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ತಿನ್ನದ ಮಕ್ಕಳಿಗೆ ನೀಡುತ್ತಿದ್ದ ಚಿಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಕಲಬುರಗಿ ವಿಭಾಗದ ಕೆಲವು ಶಾಲೆಗಳಲ್ಲಿ ವಿತರಿಸಿದ ಚಿಕ್ಕಿಗಳು ಮಕ್ಕಳು ತಿನ್ನಲು ಯೋಗ್ಯವಾಗಿರಲಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೊಬ್ಬು ಹಾಗೂ ಸಕ್ಕರೆ ಅಂಶ ಹೆಚ್ಚಿನ ಮಟ್ಟದಲ್ಲಿದೆ ಎನ್ನುವ ಕುರಿತು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಬರೆದಿದ್ದರು.
ಈ ಪತ್ರ ಆಧರಿಸಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಿಸಬೇಕು. ಚಿಕ್ಕಿ ವಿತರಣೆ ಮಾಡಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಅನುದಾನಿತ ಮತ್ತು ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಾರದ ಆರು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿತ್ತು.
ಬಹುತೇಕ ಶಾಲೆಗಳಲ್ಲಿ ಚಿಕ್ಕಿಯ ಗಾತ್ರ ಒಂದೇ ತೆರನಾಗಿ ಇಲ್ಲದಿರುವುದು, ಅವಧಿ ಮೀರಿದ ಸಂಗ್ರಹ ಮತ್ತಿತರ ಕಾರಣಗಳಿಂದಲೂ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ಚಿಕ್ಕಿ ವಿತರಣೆ ಮಾಡಬಾರದು ಎಂದು ಇಲಾಖೆ ಆದೇಶದಲ್ಲಿ ಸೂಚಿಸಿದೆ.
ಒಂದು ಮೊಟ್ಟೆ ಅಥವಾ ಬಾಳೆಹಣ್ಣಿಗೆ ₹6 ನಿಗದಿ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 51.96 ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ.