ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಗ್ರಾಮ ಆಡಳಿತ ಅಧಿಕಾರಿಗೆ ಆರಂಭದಿಂದ 21,400ರಿಂದ 42,000ವರೆಗೂ ವೇತನ ಶ್ರೇಣಿ ಇರಲಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಮತ್ತು 8 ವರ್ಷಗಳು ತುಂಬಿರುವ ಅರ್ಹಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪಿಂಚಣಿ ರಹಿತ (ಎನ್‌ಪಿಎಸ್) ಹುದ್ದೆ ಇದಾಗಿದ್ದು, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ಯಾವುದಾದರು ಒಂದು ಜಿಲ್ಲೆಗೆ ಮಾತ್ರ ಹುದ್ದೆ ಬಯಸಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ ಮಾರ್ಚ್ 04, 2024. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 04, 2024. ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ ಏಪ್ರಲ್ 06,2024.
ಆನ್ ಲೈನ್ ಮೂಲಕವೇ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ 2ಎ, 2ಬಿ, 3ಎ, 3ಬಿ) ಅವರಿಗೆ 750 ರೂಪಾಯಿ ಶುಲ್ಕ ನಿಗಧಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ 500 ರೂ. ಶುಲ್ಕವಿದೆ.