ಅನುಕಂಪ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ವ್ಯಕ್ತಿಯ ಸ್ಥಾಪಿತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
1997ರಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಪುತ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಅಭಯ್ ಎಸ್. ಒಕಾ ನೇತೃತ್ವದ ತ್ರಿಸದಸ್ಯ ಪೀಠ ಅನುಕಂಪ ಆಧಾರಿತ ಉದ್ಯೋಗ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಯಾವುದೇ ವ್ಯಕ್ತಿಯ ಹಕ್ಕಲ್ಲ. ಏಕೆಂದರೆ ಮೃತ ನೌಕರನ ಸೇವಾ ಷರತ್ತುಗಳಲ್ಲಿ ಇದರ ಉಲ್ಲೇಖವಿಲ್ಲ. ನಿಗದಿತ ಕಾಲಮಿತಿ ಬಳಿಕ ಇಂಥ ಉದ್ಯೋಗಕ್ಕೆ ಮಾಡಿದ ಮನವಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೇಮಕಾತಿ ನೀತಿಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ಒಬ್ಬರ ಪರವಾಗಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗದು. ಅನುಕಂಪ ಆಧಾರಿತ ನೇಮಕಾತಿಯು ಮೃತರ ಕುಟುಂಬಕ್ಕೆ ಆ ಸಮಯದಲ್ಲಿ ತುರ್ತು ಆರ್ಥಿಕ ಸಹಾಯ ಮಾಡಲು ಇರುವುದೇ ಹೊರತು, ಅದು ಅವರ ಪರಿಪೂರ್ಣ ಹಕ್ಕಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣ ಹಿನ್ನೆಲೆ
1997ರಲ್ಲಿ ಜೈ ಪ್ರಕಾಶ್ ಎಂಬ ಪೇದೆ ಕರ್ತವ್ಯದ ವೇಳೆ ಸಾವನ್ನಪ್ಪಿದ್ದರು. ಆಗ ಅವರ ಮಗ ಟಿಂಕು ಕೇವಲ 7 ವರ್ಷದವನಾಗಿದ್ದ. ಪ್ರಕಾಶ್‌ರ ಪತ್ನಿ ಅನಕ್ಷರಸ್ಥೆಯಾಗಿದ್ದ ಕಾರಣ ಅನುಕಂಪದ ಆಧಾರದಲ್ಲಿ ತನಗೆ ಕೆಲಸ ಕೊಡುವಂತೆ ಅರ್ಜಿ ಸಲ್ಲಿಸಿರಲಿಲ್ಲ. ಬದಲಿಗೆ, ಅಪ್ರಾಪ್ತನಾಗಿರುವ ಮಗ ವಯಸ್ಸಿಗೆ ಬಂದಾಗ ಅವನಿಗೆ ಕೆಲಸ ಕೊಡಬೇಕೆಂದು ಮನವಿ ಮಾಡಿದ್ದರು.
ಅದರಂತೆ ಟಿಂಕು 2008ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಅದನ್ನು ತಿರಸ್ಕರಿಸಿದ ಅಧಿಕಾರಿಗಳು, ನೌಕರ ಸಾವನ್ನಪ್ಪಿದ 3 ವರ್ಷಗಳೊಳಗಾಗಿ ಅರ್ಜಿ ಸಲ್ಲಿಸಬಹುದಷ್ಟೇ ಎಂದಿದ್ದರು. ಪಂಜಾಬ್ ಹಾಗೂ ಹರ್ಯಾಣ ಸರ್ಕಾರವೂ ಕ ಈ ಮನವಿ ನಿರಾಕರಿಸಿದ್ದು, ಈಗ ಸುಪ್ರೀಂ ಕೂಡ ಅವುಗಳ ನಿರ್ಧಾರ ಎತ್ತಿಹಿಡಿದಿದೆ. ಪರಿವಾರಕ್ಕೆ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದೆ.