ಬರ ಮತ್ತು ನೆರೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಮೂರು, ನಾಲ್ಕು ಪಟ್ಟು ಅಧಿಕ ಪರಿಹಾರ ನೀಡಿತ್ತು. ಅದೇ ಮಾನದಂಡದಲ್ಲಿ ಸಿದ್ದರಾಮಯ್ಯ ಸರ್ಕಾರ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
“ಬರಗಾಲ ಬಂದು ಏಳು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ. ಬೆಳಗಾವಿ ಅಧಿವೇಶನ ಕಳೆದು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರು ಚಾತಕ ಪಕ್ಷಿಗಳಂತೆ ಪರಿಹಾರಕ್ಕೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇದೆ. ಆದರೂ ಒಂದೇ ಒಂದು ಗೋಶಾಲೆ ತೆರೆದಿಲ್ಲ. ಅಲ್ಪಸಂಖ್ಯಾತ ಇಲಾಖೆ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ 1 ಸಾವಿರ ಕೋಟಿ ರೂ. ಅನುದಾನವನ್ನು ಕಾಲನಿ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ ಎನ್ ಡಿ ಆರ್ ಎಫ್ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಮೂರು ಸಾವಿರ ಕೋಟಿ ರೂ. ಗೂ ಅಧಿಕ ಪರಿಹಾರವನ್ನು ಒಂದೇ ತಿಂಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದೆವು. ಕೇಂದ್ರ ಸರ್ಕಾರ ಆಗಲೂ ತಡವಾಗಿ ನಮ್ಮ ಪಾಲಿನ ಹಣ ನೀಡಿತ್ತು. ಕೇಂದ್ರ ಸರ್ಕಾರ ಯಾವಾಗಲೂ ದೇಶವ್ಯಾಪಿ ಪರಿಹಾರ ನೀಡುತ್ತದೆ. ಅದು ನಿಗದಿತ ಪ್ರಕ್ರಿಯೆ ಪ್ರಕಾರವೇ ನಡೆಯುತ್ತದೆ. ಹೀಗಾಗಿ ಯಾವುದೇ ಪಕ್ಷವಿದ್ದರೂ ಸಹಜವಾಗಿಯೇ ತಡವಾಗುತ್ತದೆ” ಎಂದರು.
“ಲೋಕಸಭಾ ಚುನಾವಣೆ ಬಳಿಕ ಎಲ್ಲ ಗ್ಯಾರಂಟಿಗಳು ಗೋವಿಂದ ಆಗಲಿದೆ. ಮೂಗಿಗೆ ತುಪ್ಪ ಸವರಲು ತಿರುಗಿಬಿದ್ದ ಕಾಂಗ್ರೆಸ್ ಶಾಸಕರಿಗೆ ಅನುಕೂಲ ಮಾಡಲಾಗುತ್ತಿದೆ. ಕೆಲವು ಶಾಸಕರು ಬಿಟ್ಟು ಹೋಗುತ್ತಾರೆ ಎಂದು ತಿಳಿದುಬಂದಿರುವುದರಿಂದ ಹೈಕಮಾಂಡ್ ಈ ರೀತಿ ನಾಟವಾಡುತ್ತಿದೆ” ಎಂದು ಕಿಡಿಕಾರಿದರು.
ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸಲು ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿದೆ. ರಾಮ ಸೇವಾ ಸಮಿತಿಯವರು ಹಣ ಸಂಗ್ರಹಿಸಿ ಸ್ತಂಭ ಅಳವಡಿಸಿದ್ದಾರೆ. ಇದನ್ನು ಸರ್ಕಾರ ಮಾಡಿಕೊಟ್ಟಿಲ್ಲ. ಅದನ್ನು ಆಂಜನೇಯನ ದೇವಸ್ಥಾನದ ಮುಂಭಾಗ ಅಳವಡಿಸಲಾಗಿದೆ. ಹಿಂದೆಯೂ ಹನುಮನ ಧ್ವಜ ಹಾರಿಸಲಾಗಿದೆ” ಎಂದು ಹರಿಹಾಯ್ದರು.
ಬೊಮ್ಮಾಯಿ ಕಿಡಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸ್ವೀಕಾರ ಮಾಡುವುದು ಕೇವಲ ಲೋಕಸಭೆ ಚುನಾವಣೆಯ ಸ್ಟಂಟ್ ಆಗಿದ್ದು, ಹಿಂದುಳಿದವರಲ್ಲಿ ಬಲಾಢ್ಯರು ಮಾತ್ರ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಅತಿ ಹಿಂದುಳಿದವರಿಗೆ ನ್ಯಾಯಕೊಡಿಸಬೇಕಿದೆ” ಎಂದರು.
“ಹಿಂದುಳಿದ ವರ್ಗದಲ್ಲಿ ಎ.ಬಿ.ಸಿ ಎಂದು ವರ್ಗೀಕರಣ ಮಾಡಲಾಗಿದೆ. ಪ್ರವರ್ಗ ೧ರಲ್ಲಿ ಇರುವವರು ಅತ್ಯಂತ ಹಿಂದುಳಿದಿದ್ದಾರೆ. ಅವರಿಗೆ ನಿರಂತರ ಅನ್ಯಾಯವಾಗಿದೆ. ಅವರಿಗೆ ಏನೂ ಸಿಕ್ಕಿಲ್ಲ. ಬಲಿಷ್ಠ ಸಮುದಾಯದವರೇ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ” ಎಂದರು.