Homeಕರ್ನಾಟಕಬಾಲಕಿ ಕೊಲೆ | ಕುಟುಂಬಸ್ಥರನ್ನು ಭೇಟಿಯಾದ ಸಚಿವ ಪರಮೇಶ್ವರ್;‌ ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಬಾಲಕಿ ಕೊಲೆ | ಕುಟುಂಬಸ್ಥರನ್ನು ಭೇಟಿಯಾದ ಸಚಿವ ಪರಮೇಶ್ವರ್;‌ ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯನ್ನು ಮತ್ತೆ ವಾಪಸ್ ಕರೆದುಕೊಂಡು ಬರಲು ಆಗುವುದಿಲ್ಲ.‌ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ನೇಮಿಸಿ, ಸ್ಪೆಷಲ್ ಕೋರ್ಟ್ ತೆರೆಯಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ಮಡಿಕೇರಿ ಸೋಮವಾರಪೇಟೆಯ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಹತ್ಯೆಯಾದ ಸ್ಥಳ ಪರಿಶೀಲನೆ ನಡೆಸಿದ, ಬಳಿಕ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

“ಕೊಲೆಯಾದ ವಿದ್ಯಾರ್ಥಿನಿ ಮೀನಾ 16 ವರ್ಷ.‌ ಆರೋಪಿ ಪ್ರಕಾಶ್ ಎಂಬುವನಿಗೆ 32 ವರ್ಷ. ಬಾಲಕಿಯ ತಂದೆ-ತಾಯಿಗೆ ಒತ್ತಾಯ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಗೊತ್ತಾದ ಕೂಡಲೇ ತಿಳಿಹೇಳಿ ತಡೆದಿದ್ದರು. ವಿದ್ಯಾರ್ಥಿನಿಗೆ 18 ವರ್ಷ ತುಂಬಿದ ನಂತರ ಮದುವೆಯಾಗುವಂತೆ ಬುದ್ಧಿಹೇಳಿದ್ದಾರೆ. ಇದಾದ ಬಳಿಕ ಬಾಲಕಿಯ ಮನೆ ಬಳಿ ಹೋಗಿ ಆಕೆಯ ತಂದೆ-ತಾಯಿ ಜೊತೆ ಜಗಳ ತೆಗೆದಿದ್ದಾನೆ. ತನ್ನ ಜೊತೆ ಮದುವೆ ಮಾಡಿಕೊಡುವಂತೆ ಒತ್ತಾಯಿಸಿ, ಬಾಲಕಿಯ ತಾಯಿಗೆ ಹೊಡೆದು, ಬಾಲಕಿಯನ್ನು ಎಳೆದೊಯ್ದು ಕೃತ್ಯ ಎಸಗಿದ್ದಾನೆ ಎಂಬುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ” ಎಂದರು‌.

“ಇದನ್ನು ನಿಜಕ್ಕು ಮನುಷ್ಯರು ಒಪ್ಪಿಕೊಳ್ಳುವ ಕೃತ್ಯವಲ್ಲ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕೆನ್ನುವ ನಿಟ್ಟಿನಲ್ಲಿ ಪೊಲೀಸರು ಕೆಲಸ‌ ಮಾಡುತ್ತಿದ್ದಾರೆ. ಕುಟುಂಬವನ್ನು ನೋಡಿದರೆ ಬಹಳ ನೋವಾಗುತ್ತದೆ. ಬಡತನದ ಕುಟುಂಬ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರದ ಬಗ್ಗೆ ಮಾತನಾಡಲು ಆಗುವುದಿಲ್ಲ. ನೀತಿ ಸಂಹಿತೆ ಮುಗಿದ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದರು.

“ತನಿಖೆಯ ವರದಿ ಆಧರಿಸಿ ಅಧಿಕಾರಿಗಳ ತಪ್ಪಿದ್ದರೆ ಕ್ರಮ‌ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ತನಿಖೆ ಮುಗಿಯುವವರೆಗೂ ಯಾವುದೇ ಹೇಳಿಕೆ ಕೊಡಲು ಆಗುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದರು.

ಶೆಟ್ಟರ್‌ನಿಂದ ಸರ್ಟಿಫಿಕೇಟ್ ಬೇಕಿಲ್ಲ

ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಶೆಟ್ಟರ್ ಅವರ ಅಧಿಕಾರವಧಿಯಲ್ಲಿನ ಅಂಕಿ-ಅಂಶಗಳನ್ನು ತೆಗೆಸಿ ತೋರಿಸಿದರೆ ಅವರಿಗೆ ಗೊತ್ತಾಗುತ್ತದೆ. ಅವರ ಕಾಲದಲ್ಲಿ ಎಷ್ಟು ಕೊಲೆ, ರೇಪ್, ಅಪರಾಧ ಚಟುವಟಿಕೆಗಳಿತ್ತು ಎಂಬುದು ಗೊತ್ತಾಗುತ್ತದೆ. ಆಗ ಅವರಿಗೆ ಅರ್ಥವಾಗುತ್ತದೆ. ಜಗದೀಶ್ ಶೆಟ್ಟರ್ ಅವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ಜನಗಳಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು. ಜನಗಳೇ ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ” ಎಂದು ತರಿಗೇಟನು ನೀಡಿದರು.

ಈ ವೇಳೆ ಶಾಸಕ ಡಾ.ಮಂಥರ್ ಗೌಡ, ಐಜಿಪಿ ಅಮಿತ್ ಸಿಂಗ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments