ಆಧುನಿಕ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಅರಣ್ಯ ಇಲಾಖೆ ಬದಲಾಗುತ್ತಿದ್ದು, ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ಗರುಡಾಕ್ಷಿ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಅರಣ್ಯ ಇಲಾಖೆ Wild Life Trust of India (WTI) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್‌ಲೈನ್ / ಡಿಜಿಟಲ್ FIR ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, “ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅರಣ್ಯ ಅಪರಾಧ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಾತ್ರಿ ಪಡಿಸಲು ಹಾಗೂ ಆ ಮೂಲಕ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ” ಎಂದರು.
“ಈ ತಂತ್ರಾಂಶ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ.
ಪ್ರಸ್ತುತ ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ (Pilot) ಜಾರಿಗೊಳಿಸಲಾಗುತ್ತದೆ” ಎಂದು ಹೇಳಿದರು.
“ಈ ತಂತ್ರಾಂಶದ ಕಾರ್ಯನಿರ್ವಹಣೆಯ ಬಗ್ಗೆ ಕ್ಷೇತ್ರ ಮಟ್ಟದ ಪ್ರತಿಕ್ರಿಯೆ ಆಧಾರದ ಮೇಲೆ ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಿ ಹಂತ ಹಂತವಾಗಿ ರಾಜ್ಯದ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು ಮತ್ತು ಆಫ್.ಐ.ಆರ್. ಅನ್ನೂ ಗರುಡಾಕ್ಷಿ ತಂತ್ರಾಂಶದ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.
ಗರುಡಾಕ್ಷಿ ಆನ್ ಲೈನ್ ಎಫ್..ಆರ್. ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬುತ್ತದೆ” ಎಂದರು.
ಅಪರಾಧಿಗಳಿಗೆ ಶಿಕ್ಷೆ ಖಚಿತ
“ಅರಣ್ಯ ಅಪರಾಧ ಕುರಿತಂತೆ ದೂರು ಕೊಟ್ಟವರಿಗೆ ಎಫ್.ಐ.ಆರ್. ಪ್ರತಿ ಲಭಿಸಲಿದೆ, ಜೊತೆಗೆ ಜಾರ್ಜ್ ಶೀಟ್ ಹಾಕಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಅವಕಾಶ ಆಗುತ್ತದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಕೂಡಲೇ ನ್ಯಾಯಾಲಯದಲ್ಲಿ ಅಪರಾಧ ಸಂಖ್ಯೆ (ಸಿಸಿ ನಂಬರ್) ದಾಖಲಾಗುತ್ತದೆ, ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ” ಎಂದು ವಿವರಿಸಿದರು.
“ಅರಣ್ಯ ಭೂಮಿ ಒತ್ತುವರಿ, ಅಕ್ರಮ ಮರ ಕಡಿತಲೆ, ವನ್ಯಜೀವಿಗಳ ಅಕ್ರಮ ಬೇಟೆಗೆ ಸಂಬಂಧಿಸಿದಂತೆ ಆನ್ ಲೈನ್ ಎಫ್.ಐ.ಆರ್. ಹಾಕಿದರೆ, ಚಾರ್ಜ್ ಶೀಟ್ ಹಾಕಲೇ ಬೇಕಾಗತ್ತದೆ. ಲಾಂಗ್ ಪೆಂಡೆನ್ಸಿ ಇರಲು ಸಾಧ್ಯವಿಲ್ಲ. ಈ ಬಗ್ಗೆ ಹೈಕೋರ್ಟ್ ಕೂಡ ಸೂಚನೆ ನೀಡುತ್ತದೆ. ಇದರಿಂದ ಭೂ ಕಬಳಿಕೆದಾರರಿಗೆ ಶಿಕ್ಷೆ ಆಗುತ್ತದೆ. ಹೀಗಾಗಿ ಅರಣ್ಯ ಅಪರಾಧಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತದೆ” ಎಂದರು.