ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಿದ್ದರು. ಸ್ಥಳೀಯ ಶಾಸಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರು, ವಿಕಲಚೇತನರಿಗೆ ಪಿಂಚಣಿ ಅದೇಶ ಪತ್ರಗಳನ್ನು ಹಾಗೂ ಸಾವಿರಾರು ಜನರಿಗೆ ಸಿಹಿ ತಿಂಡಿ ಬಾಕ್ಸ್ ಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ, “ಜನಸಾಮಾನ್ಯರಿಗೆ ಶ್ರೀಮಂತರಿಗೆ ಸಿಗುವ ಹೈಟೆಕ್ ವೈದ್ಯಕೀಯ ಸೌಲಭ್ಯಗಳು ಸಿಗಬೇಕು ಮುಖ್ಯಮಂತ್ರಿಗಳ ಸಹಕಾರದಿಂದ ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆ ತರಲಾಗಿದೆ. ಹೈಟೆಕ್ ಆಸ್ಪತ್ರೆಗಳು, ವೈದ್ಯಕೀಯ ಸಲಕರಣೆಗಳು ಹಾಗೂ ತಜ್ಞ ವೈದ್ಯರುಗಳು ಇವೆಲ್ಲ ಬಡವರ, ಮಧ್ಯಮವರ್ಗದವರ ಆರೋಗ್ಯ ಸೇವೆಗೆ ಬಳಕೆಯಾಗುತ್ತಿದೆ” ಎಂದರು.
“ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂಬ ಆಶಯದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಸರ್ಕಾರಿ ನೌಕರರು, ಗಾರ್ಮೆಂಟ್ಸ್ ನೌಕರರು, ಐ.ಟಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಯೋಜನೆ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ” ಎಂದು ಹೇಳಿದರು.
“ದೇಶದಲ್ಲಿಯೆ ಪ್ರಪ್ರಥಮ ಎಂಬ ಹೆಗ್ಗಳಿಕೆ ಇರುವ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಉನ್ನತ ಗುಣಮಟ್ಟದಲ್ಲಿ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ . ಸಾರ್ವಜನಿಕರು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ ಸರ್ಕಾರದ ಆಸ್ಪತ್ರೆಗಳು ನಿಮ್ಮ ಸೇವೆಗೆ ಸದಾ ಸಿದ್ದವಾಗಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರ ಸುಂದರ, ಸ್ವಚ್ಚನಗರ ಮಾಡಲು ಪರಿಸರ ಜಾಗೃತಿ ಅಭಿಯಾನ ಮತ್ತು ಕಸಿ ಕಸ, ಒಣ ಕಸ ವಿಂಗಡನೆ ಜಾಗೃತಿ ಮೂಡಿಸಲಾಗುತ್ತಿದೆ.
ರಸ್ತೆ, ಪುಟ್ ಪಾತ್ ಮತ್ತು ಚರಂಡಿ ವ್ಯವಸ್ಥೆ ಸುಧಾರಣೆ ಮಾದರಿ ವಿಧಾನಸಭಾ ಕ್ಷೇತ್ರ ಮಾಡುವಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ” ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಹಾಗೂ ಪಾಲಿಕೆ ಮಾಜಿ ಸದಸ್ಯರುಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.