ಕೇಂದ್ರ ಸರ್ಕಾರದ SDRF ಮಾರ್ಗಸೂಚಿಗಳ ಪ್ರಕಾರ NDRF ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33,58,999 ರೈತರಿಗೆ ಒಟ್ಟು ರೂ.636.45 ಕೋಟಿಗಳನ್ನು ಈಗಾಗಲೇ ಫೆಬ್ರವರಿ ಹಾಗೂ ಮಾರ್ಚ್ ಮಾಹೆಗಳಲ್ಲಿ ಪಾವತಿಸಲಾಗಿದೆ. ಈ ಪೈಕಿ 4,43,691 ಅತೀ ಕಡಿಮೆ ಜಮೀನು ಇರುವ ರೈತರಿಗೆ SDRF ಮಾರ್ಗಸೂಚಿಗಳನ್ವಯ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
2023 ಮುಂಗಾರು ಬರ – ರೈತರಿಗೆ ಬೆಳೆ ಹಾನಿ ಪರಿಹಾರ ಪಾವತಿಸಿದ ವಿವರಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಹಂಚಿಕೊಂಡಿರುವ ಅವರು, ” ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ NDRFರಡಿ ಬರ ಪರಿಹಾರ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲು ಪ್ರಕರಣ ಸಂಖ್ಯೆ:WP-210/2024 ರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ” ಎಂದಿದ್ದಾರೆ.
“ಸರ್ವೋಚ್ಚ ನ್ಯಾಯಾಲಯದ ಪ್ರಕರಣ ಸಂಖ್ಯೆ:WP-210/2024 ರಲ್ಲಿ ದಿನಾಂಕ:26-04-2024ರಂದು ರೂ.3,454.22 ಕೋಟಿಗಳನ್ನು ಕೇಂದ್ರ ಸರ್ಕಾರವು NDRF ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಿಡುಗಡೆ ಅಗುತ್ತಿದಂತೆಯೇ ಅರ್ಹ ರೈತರಿಗೆ ಪರಿಹಾರ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“27 ಮತ್ತು 28ನೇ ಏಪ್ರಿಲ್, ಎರಡು ದಿನಗಳು ರಜಾದಿನಗಳು, ನಂತರ 29 ಮತ್ತು 30 ಏಪ್ರಿಲ್, ಎರಡು ದಿನಗಳಂದು ಬಾಕಿ ಉಳಿದ ಬೆಳೆ ಹಾನಿ ಪರಿಹಾರ ನೀಡಲು ಎಲ್ಲಾ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತು. ಮೇ 1 ರಂದು ಪುನಃ ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರಿ ರಜಾ ದಿನವಾಗಿರುತ್ತದೆ” ಎಂದಿದ್ದಾರೆ.
“ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ SDRF ಮಾರ್ಗಸೂಚಿಗಳ ಪ್ರಕಾರ ಅರ್ಹತೆಯನುಸಾರ ಎಲ್ಲಾ ಅರ್ಹ ರೈತರಿಗೆ ಪಾವತಿ ಮಾಡಲು ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರಿಗೆ ರೂ. 3,454.22 ಕೋಟಿಗಳನ್ನು ಬಿಡುಗಡೆಗೊಳಿಸಲು ದಿನಾಂಕ:02-05-2024 ರಂದು ಆದೇಶ ಹೊರಡಿಸಲಾಗಿದೆ” ಎಂದು ತಿಳಿಸಿದ್ದಾರೆ.
“ದಿನಾಂಕ 06-05-202403 ರಂತೆ ಒಟ್ಟು 27,38,911 ರೈತರಿಗೆ ಅರ್ಹತೆಯನುಸಾರ ಒಟ್ಟು ರೂ.2,425.13 ಕೋಟಿಗಳನ್ನು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ DBT ಮುಖಾಂತರ ನೇರ ವರ್ಗಾವಣೆ ಮಾಡಲು ಕಳೆದ ವಾರಂತ್ಯೆವೇ ಕ್ರಮವಹಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ನಂತರ ಆರ್.ಬಿ.ಐ ನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದೇ ಸೋಮವಾರದಿಂದ ಅನ್ವಯವಾಗುವಂತೆ ರೈತರ ಖಾತೆಗೆ ನೇರವಾಗಿ ಜಮಾವಾಗಲಿದೆ. ಎಲ್ಲ ರೈತರ ಖಾತೆಗಳಿಗೆ ಮುಂದಿನ 2-3 ದಿನಗಳೊಳಗಾಗಿ ಬರಪರಿಹಾರ ಮೊತ್ತವು ಜಮೆಯಾಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
“ಇಲ್ಲಿಯವರೆಗೆ ಒಟ್ಟು 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿಸಲಾಗಿದೆ. ಇನ್ನೂ 2 ಲಕ್ಷ ರೈತರಿಗೆ ಬರಪರಿಹಾರ ಮೊತ್ತವನ್ನು ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ” ಎಂದು ಹೇಳಿದ್ದಾರೆ.
“ರಾಜ್ಯದ 224 ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರವೇ ರೈತರಿಗೆ ಬರ ಪರಿಹಾರ ಪಾವತಿಸಿದ್ದು, ಇದೀಗ NDRF ಪರಿಹಾರ ಹಣ ಲಭ್ಯವಾಗಿದ್ದು ಆ ಹಣವನ್ನೂ ನಿಯಮದಂತೆ ಶೀಘ್ರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗಿದೆ. ಅಲ್ಲದೆ ರಾಜ್ಯದ ಬಾಕಿ ಪರಿಹಾರ ಹಣ ಪಡೆಯಲೂ ಕೇಂದ್ರದ ಜೊತೆಗಿನ ಕಾನೂನು ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.