2021ರಲ್ಲಿ ಆರ್ಸಿಬಿ ತಂಡದ ಹೆಚ್ಚುವರಿ ಆಟಗಾರನಾಗಿದ್ದ ನ್ಯೂಜಿಲೆಂಡ್ ಆಟಗಾರ ಫಿನ್ ಅಲೆನ್ ಅವರು ಅಚ್ಚರಿಯ ವಿಶ್ವ ದಾಖಲೆ ಮಾಡಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ನಲ್ಲಿ (ಎಂಎಲ್ಸಿ) 51 ಬಾಲಿಗೆ 151 ರನ್ ಭಾರಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 296.07 ಎಂಬುದು ವಿಶೇಷ.
ಜೂನ್ 13ರಂದು ಸಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ಫ್ರೀಡಂ ತಂಡದ ಮಧ್ಯೆ ಪಂದ್ಯ ನಡೆದಿದೆ. ಎಂಎಲ್ಸಿ ಲೀಗ್ನಲ್ಲಿ ಸಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ ಪರವಾಗಿ ಫಿನ್ ಅಲೆನ್ ಅವರು ಆಡುತ್ತಿದ್ದಾರೆ. ಅಲೆನ್ ಬಾರಿಸಿದ 151 ರನ್ಗಳಲ್ಲಿ 5 ಫೋರ್ ಹಾಗೂ 19 ಸಿಕ್ಸ್ ಒಳಗೊಂಡಿದೆ.
ಈ ಮೂಲಕ ಟಿ-20 ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರ ಎಂಬ ಖ್ಯಾತಿಗೂ ಫಿನ್ ಅಲೆನ್ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಸಾಹಿಲ್ ಚೌಹಾಣ್ ಅವರು ಒಂದೇ ಇನ್ನಿಂಗ್ಸ್ನಲ್ಲಿ 18 ಸಿಕ್ಸ್ ಬಾರಿಸಿದ್ದರು.
ಅಲೆನ್ ಆಡಿದ ಅದ್ಭುತ ಇನ್ನಿಂಗ್ಸ್ನಿಂದ 20 ಓವರ್ಗಳಲ್ಲಿ ತಂಡ 269 ರನ್ ಕಲೆ ಹಾಕಲು ಶಕ್ಯವಾಯಿತು. ಈ ಬೃಹತ್ ಮೊತ್ತ ಬೆನ್ನತ್ತಿದ ವಾಷಿಂಗ್ಟನ್ ಫ್ರೀಡಂ ತಂಡ 146 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಸಾನ್ ಫ್ರಾನ್ಸಿಸ್ಕೋ ತಂಡ 123 ರನ್ಗಳ ಭರ್ಜರಿ ಗೆಲುವು ಕಂಡರು.
ಫಿನ್ ಅಲೆನ್ ಅವರನ್ನು 2025ರಲ್ಲಿ ಯಾರೂ ಖರೀದಿ ಮಾಡಿರಲಿಲ್ಲ
2021ರ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಆಟಗಾರ ಜೋಶ್ ಫಿಲಿಪ್ಪೆ ಅವರು ಅಲಭ್ಯವಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಫಿನ್ ಆಲೆನ್ ಅವರನ್ನು ಆರ್ಸಿಬಿ ಪಡೆದುಕೊಂಡಿತು. ಆದರೆ, ಯಾವುದೇ ಪಂದ್ಯವನ್ನು ಆಡಿಸಿರಲಿಲ್ಲ. ಆರ್‌ಸಿಬಿಯಲ್ಲಿ ಬೆಂಚ್ ಕಾದಿದ್ದ ಫಿನ್ ಅಲೆನ್ ಆಟ ಕ್ರಿಕೆಟ್ ಲೋಕದ ಗಮನ ಸೆಳೆದಿದೆ.