ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ವಸಂತ ಬಂಗೇರ (79) ವಿಧಿವಶರಾಗಿದ್ದಾರೆ.
ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ಸಮಯದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಬೆಳ್ತಂಗಡಿಯ ಅವರ ನಿವಾಸಕ್ಕೆ ತರಲಾಗುತ್ತದೆ. ನಾಳೆ ಅವರ ಮನೆ ಬಳಿ ಅಂತಿಮ ದರ್ಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಾಳೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ವಸಂತ ಬಂಗೇರರು, ಬೆಳ್ತಂಗಡಿಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದರು.
ಸಿಎಂ ಸಿದ್ದರಾಮಯ್ಯ ಸಂತಾಪ
“ನನ್ನ ಆತ್ಮೀಯ ಗೆಳೆಯ ಮತ್ತು ದೀರ್ಘ ಕಾಲದ ಸಹದ್ಯೋಗಿ ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಬಂಗೇರ ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
“ನೇರ, ನಿಷ್ಠುರ ನಡೆ-ನುಡಿಯ ಬಂಗೇರ, ಆಂತರ್ಯದಲ್ಲಿ ಅಪಾರವಾದ ಜನಪರ ಕಾಳಜಿ ಮತ್ತು ಸ್ನೇಹನಿಷ್ಠೆಯನ್ನು ಹೊಂದಿದ್ದ ದೊಡ್ಡ ಮನುಷ್ಯ. ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಂಗೇರ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾತನಾಡಿಸಿದ್ದೆ. ಇಷ್ಟು ಬೇಗ ನಮ್ಮನ್ನು ಅಗಲಿ ಹೋಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.