Homeದೇಶಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ನಿಧನ

ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ನಿಧನ

ಇಸ್ರೋ ಮಾಜಿ ಅಧ್ಯಕ್ಷ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕೆ ಕಸ್ತೂರಿ ರಂಗನ್ ಅವರು ಶುಕ್ರವಾರ ನಿಧನರಾಗಿದ್ದಾರೆ.

84 ವರ್ಷ ವಯಸ್ಸಿನ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (ಆರ್‌ಆರ್‌ಐ) ವ್ಯವಸ್ಥೆ ಮಾಡಲಾಗುತ್ತಿದೆ.

ಕಸ್ತೂರಿ ರಂಗನ್ ಅವರು 2003-09ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು. ಹಾಗೆಯೇ ಯೋಜನಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಸಿಎಂ ಸೇರಿ ಗಣ್ಯರ ಸಂತಾಪ

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಆಗಸದೆತ್ತರಕ್ಕೆ ಹಾರಿಸಿದ್ದ ಖ್ಯಾತ ಖಭೌತ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರ ನಿಧನದಿಂದ ಆಘಾತವಾಗಿದೆ. ಕರ್ನಾಟಕ ಮೂಲದ ಡಾ.ಕಸ್ತೂರಿರಂಗನ್ ಅವರಿಗೆ ನಮ್ಮ ರಾಜ್ಯದ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಎಕ್ಸ್‌ ತಾಣದಲ್ಲಿ ತಂತಾಪ ಸೂಚಿಸಿರುವ ಅವರು, “ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಗೆ ದೀರ್ಘ ಕಾಲ ಅಧ್ಯಕ್ಷರಾಗಿ ಮತ್ತು ಕೇಂದ್ರದ ಬಾಹ್ಯಾಕಾಶ ಮಂಡಳಿಯ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್ ಅವರು ಸಲ್ಲಿಸಿದ ಸೇವೆಯಿಂದಾಗಿ ಭಾರತ ಇಂದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ” ಎಂದು ಸ್ಮರಿಸಿದ್ದಾರೆ.

“ಡಾ.ಕಸ್ತೂರಿ ರಂಗನ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ” ಎಂದಿದ್ದಾರೆ.

ಕುಮಾರಸ್ವಾಮಿ ಸಂತಾಪ

“ಭಾರತದ ಹೆಮ್ಮೆಯ ಪುತ್ರ, ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ @isro ವಿಶ್ರಾಂತ ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಸಮಿತಿ ಅಧ್ಯಕ್ಷರೂ ಆಗಿದ್ದ ಪದ್ಮವಿಭೂಷಣ ಡಾ. ಕಸ್ತೂರಿ ರಂಗನ್ ಅವರ ನಿಧನದ ವಾರ್ತೆ ಕೇಳಿ ನನಗೆ ಅತೀವ ದುಃಖ ಉಂಟಾಯಿತು. ಅವರ ಜತೆ ನನಗೆ ಆತ್ಮೀಯ ಬಾಂಧವ್ಯವಿತ್ತು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಮಾರ್ಗದರ್ಶನ, ಸಲಹೆ, ಸಹಕಾರವನ್ನು ನಾನೆಂದಿಗೂ ಮರೆಯಲಾರೆ” ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

“ಇಸ್ರೋ ಸಂಸ್ಥೆಯನ್ನು 9 ವರ್ಷ ಮುನ್ನಡೆಸಿದ್ದ ಕಸ್ತೂರಿ ರಂಗನ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಅನೇಕ ದಿಗ್ವಿಜಯಗಳ ಹಿಂದಿನ ಶಕ್ತಿ ಆಗಿದ್ದರು. ಅವರು ಬೆಂಗಳೂರು ನಗರದ ಜತೆ ಭಾವನಾತ್ಮಕ ಬೆಸುಗೆ ಹೊಂದಿದ್ದರು. ಪರಿಸರ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಅಪರಿಮಿತ ಕೊಡುಗೆ ನೀಡಿದ್ದರು. ರಾಜ್ಯಸಭೆ ಸದಸ್ಯರಾಗಿ ದೇಶದ ಮಹತ್ವಪೂರ್ಣ ನೀತಿಗಳನ್ನು ರೂಪಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರ ಅಗಲಿಕೆ ರಾಷ್ಟ್ರಕ್ಕೆ ಬಹುದೊಡ್ಡ ನಷ್ಟ. ಅಗಲಿದ ಶ್ರಿಯುತರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರು, ಅಭಿಮಾನಿ ವೃಂದಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments