Homeಕರ್ನಾಟಕಅರಣ್ಯ ಪ್ರದೇಶ ಕ್ಷೀಣ, ವಸತಿ ಪ್ರದೇಶ ವಿಸ್ತರಣೆಯಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚು: ಈಶ್ವರ ಖಂಡ್ರೆ

ಅರಣ್ಯ ಪ್ರದೇಶ ಕ್ಷೀಣ, ವಸತಿ ಪ್ರದೇಶ ವಿಸ್ತರಣೆಯಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚು: ಈಶ್ವರ ಖಂಡ್ರೆ

ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು, ವಸತಿ ಪ್ರದೇಶಗಳ ವಿಸ್ತರಣೆಯಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಮೈಸೂರು ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, “ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಕಾಡಿನಂಚಿನ ಜನರಿಗೆ ಮತ್ತು ಮಕ್ಕಳಿಗೆ ವನ್ಯಜೀವಿಗಳ ಸ್ವಭಾವದ ಬಗ್ಗೆ ಮತ್ತು ಸಹಬಾಳ್ವೆಯ ಬಗ್ಗೆ ತಿಳಿಸಿ ಹೇಳುವ ಅಗತ್ಯವಿದೆ. ಈ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗಳು ಮತ್ತು ಅರಣ್ಯ ಸಿಬ್ಬಂದಿ ಮಾಡಬೇಕು” ಎಂದರು.

ನಿನ್ನೆ ಸರಗೂರು ತಾಲೂಕಿನಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಅವರ ಆತ್ಮಕ್ಕೆ ಶಾಂತಿ ಕೋರಿದ ಸಚಿವರು, “ಅವರ ಕುಟುಂಬದವರೊಂದಿಗೆ ಸರ್ಕಾರ ಇದೆ. ನಿಯಮಾನುಸಾರ ಕುಟುಂಬದವರಿಗೆ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

ಮೈಸೂರು ಪ್ಲಾಸ್ಟಿಕ್ ಮುಕ್ತ ನಗರ

“ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಮುಖ್ಯಮಂತ್ರಿಯವರೇ ಘೋಷಿಸಿದ್ದಾರೆ. ಮಂಡಳಿಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳೊಂದಿಗೆ ಸೇರಿ ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಕೈಜೋಡಿಸಬೇಕು. ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಬಾರದು” ಎಂದರು.

ಹವಾಮಾನ ವೈಪರೀತ್ಯದ ಸವಾಲು

“ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಇಂದು ದೊಡ್ಡ ಸವಾಲಾಗಿದ್ದು, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. 2 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿತ ಆಗಿತ್ತು, ಕೇರಳದ ವಯನಾಡಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿತ್ತು. ಇಂತಹ ಅನಾಹುತ ತಪ್ಪಬೇಕಾದರೆ ಪ್ರಕೃತಿ ಪರಿಸರದ ಕಾಳಜಿ ವಹಿಸಬೇಕು. ಹವಾಮಾನ ವೈಪರೀತ್ಯದಿಂದ, ಒಂದು ತಿಂಗಳ ಮಳೆ ಒಂದು ವಾರದಲ್ಲಿ ಬೀಳುತ್ತಿದೆ. ಒಂದು ವಾರದ ಮಳೆ ಒಂದು ದಿನದಲ್ಲಿ ಬೀಳುತ್ತಿದೆ. ಒಂದು ದಿನದ ಮಳೆ ಒಂದು ಗಂಟೆಯಲ್ಲಿ ಸುರಿಯುತ್ತಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಗಟ್ಟಲು ನಾವು ಹೆಚ್ಚು ಹೆಚ್ಚು ಮರ ಬೆಳೆಸಬೇಕು, ಅರಣ್ಯ ಸಂರಕ್ಷಿಸಬೇಕು” ಎಂದು ತಿಳಿಸಿದರು.

“ಬೇಸಿಗೆಯಲ್ಲಿ ತಾಪಮಾನವೂ ಅಧಿಕವಾಗಿ ಏರುತ್ತಿದೆ. ಹಜ್ ಯಾತ್ರೆಗೆ ಹೋದ ಸಾವಿರಾರು ಜನರು ಬಿಸಿಲ ತಾಪದಿಂದ ಮೃತಪಟ್ಟರು, ದೆಹಲಿ, ಉತ್ತರ ಭಾರತದಲ್ಲೂ ಬಿಸಿಲ ತಾಪಕ್ಕೆ ಜನರು ಬಲಿಯಾಗುತ್ತಾರೆ. ತಾಪಮಾನ ಏರಿಕೆಯನ್ನು ವೃಕ್ಷ ಸಂವರ್ಧನೆಯಿಂದ ಮಾತ್ರ ತಡೆಯಲು ಸಾಧ್ಯ” ಎಂದರು.

ಇಂದಿರಾ ಗಾಂಧಿ ಕೊಡುಗೆ ಸ್ಮರಣೆ

“ದೂರದರ್ಶಿತ್ವದ ನಾಯಕರಾಗಿದ್ದ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಪ್ರಕೃತಿ ಪರಿಸರ, ವನ, ವನ್ಯಜೀವಿ ಉಳಿಸಲು ರೂಪಿಸಿದ ಕಾನೂನುಗಳು ಮತ್ತು ಕ್ರಮಗಳ ಫಲವಾಗಿ ಇಡೀ ದೇಶದಲ್ಲಿ ಪರಿಸರ, ಪ್ರಕೃತಿ, ಅರಣ್ಯ ಉಳಿದಿದೆ” ಎಂದು ಹೇಳಿದರು.

ಸಮಾರಂಭದಲ್ಲಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ಶಾಸಕರುಗಳಾದ ಜಿ.ಟಿ. ದೇವೇಗೌಡ, ಅನಿಲ್ ಚಿಕ್ಕ ಮಾದು, ಮಂಡಳಿ ಸದಸ್ಯರಾದ ಮರಿಸ್ವಾಮಿ, ಶರಣು ಮೋದಿ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments