Homeಕರ್ನಾಟಕಕಲ್ಲು ಶಿಲೆಯಾಗಬೇಕಾದರೆ ಹತ್ತಾರು ಪೆಟ್ಟು ಬೀಳಬೇಕು, ಡಿಕೆಶಿ ಮೇಲೆ ಎಲ್ಲರಿಗೂ ಪ್ರೀತಿ ಹೆಚ್ಚಾಗಿದೆ: ಡಿ ಕೆ...

ಕಲ್ಲು ಶಿಲೆಯಾಗಬೇಕಾದರೆ ಹತ್ತಾರು ಪೆಟ್ಟು ಬೀಳಬೇಕು, ಡಿಕೆಶಿ ಮೇಲೆ ಎಲ್ಲರಿಗೂ ಪ್ರೀತಿ ಹೆಚ್ಚಾಗಿದೆ: ಡಿ ಕೆ ಸುರೇಶ್

ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಎಲ್ಲರಿಗೂ ಇದೆ. ಹೀಗಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಶಿವಕುಮಾರ್ ಅವರು ಆಗಾಗ್ಗೆ ಹೇಳುತ್ತಿರುತ್ತಾರೆ. ಕಲ್ಲಿಗೆ ಪೆಟ್ಟು ಬಿದ್ದಾಗಲೇ ಶಿಲೆಯಾಗಿ ಮಾರ್ಪಾಡಾಗುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಮಾರ್ಮಿಕವಾಗಿ ಹೇಳಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು,

ನಾಲ್ಕೈದು ಸಚಿವರು ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲಾ. ಎಲ್ಲರೂ ಸೇರಿ ಒಳ್ಳೆಯದನ್ನು ಬಯಸುತ್ತಿದ್ದು ಒಳ್ಳೆಯದೇ ಆಗುತ್ತದೆ. ಯಾರಿಗಾದರೂ ಒಳ್ಳೆಯದಾಗಬೇಕಾದರೆ ಹತ್ತಾರು ಜನರ ಪೆಟ್ಟು ಬೀಳಬೇಕು. ಅದನ್ನು ನಾವು ತಪ್ಪಾಗಿ ತಿಳಿಯಬಾರದು, ಅದನ್ನು ಪ್ರಸಾದವಾಗಿ ಸ್ವೀಕರಿಸಬೇಕು” ಎಂದು ತಿಳಿಸಿದರು.

ಪ್ರಸಾದ ಹೆಚ್ಚಾಗಿ ಸ್ವೀಕರಿಸಿದರೆ ಹೊಟ್ಟೆ ನೋವು ಬರುವುದಿಲ್ಲವೇ ಎಂದು ಮಾರ್ಮಿಕವಾಗಿ ಕೇಳಿದ ಪ್ರಶ್ನೆಗೆ, “ನಮಗೆ ಆ ರೀತಿ ಬರುವುದಿಲ್ಲ. ನಾವು ಹಳ್ಳಿಯಲ್ಲಿ ಬೆಳೆದಿದ್ದೇವೆ” ಎಂದು ಮಾರ್ಮಿಕವಾಗಿಯೇ ಉತ್ತರಿಸಿದರು.

ಡಿ.ಕೆ. ಶಿವಕುಮಾರ್ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಚಿವ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ರಾಜಣ್ಣ ಅವರಿಗೆ ಡಿ.ಕೆ. ಶಿವಕುಮಾರ್ ಅವರ ಮೇಲೆ ಗೌರವ, ಪ್ರೀತಿ ಜಾಸ್ತಿ. ಹೀಗಾಗಿ ಆ ರೀತಿ ಹೇಳಿದ್ದಾರೆ” ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬಿದೆಯಾ ಎಂಬ ರಾಜಣ್ಣ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಕೊಂಬಿದೆಯೇ ಇಲ್ಲವೇ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ” ಎಂದರು.

ನೀವು ಬಹಳ ಸೈಲೆಂಟಾಗಿದ್ದೀರಾ ಎಂದು ಕೇಳಿದಾಗ, “ಇದು ಮಳೆ ಬರುವ ಕಾಲ ಅಲ್ಲ, ಮಳೆ ಬರಲು ಇನ್ನ ಕಾಲಾವಕಾಶವಿದೆ” ಎಂದು ತಿಳಿಸಿದರು.

ಖಾಲಿ ಇಲ್ಲದ ಹುದ್ದೆಗೆ ಈಗ ಚರ್ಚೆ ಯಾಕೆ?

ಸಿಎಂ ಬದಾವಣೆಯಾದರೆ ಶಾಸಕರ ಅಭಿಪ್ರಾಯ ಪಡೆಯಲೇಬೇಕು ಎಂಬ ಪಟ್ಟಿನ ಬಗ್ಗೆ ಕೇಳಿದಾಗ, “ಆ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ನಾಯಕರನ್ನು ಕೇಳಿ. ಈಗ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಖಾಲಿ ಇಲ್ಲದ ಸ್ಥಾನಕ್ಕೆ ಈಗ ಚರ್ಚೆ ಯಾಕೆ? ಚರ್ಚೆ ಹುಟ್ಟು ಹಾಕಿದ್ದು ಯಾರು? ನನಗೆ ಗೊತ್ತಿಲ್ಲ” ಎಂದರು.

ಪವರ್ ಶೇರಿಂಗ್ ಇಲ್ಲವೇ ಎಂದು ಕೇಳಿದಾಗ, “ನಾನು ಈ ವಿಚಾರದಿಂದ ಹೊರಗೆ ಇದ್ದೇನೆ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನ್ಯಾಕೆ ಅದರ ಬಗ್ಗೆ ಮಾತನಾಡಲಿ. ಈ ಸಿನಿಮಾದಲ್ಲಿ ಇರುವವರನ್ನು ಕೇಳಿ. ನಾನು ಈ ಸಿನಿಮಾದಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಎಂದು ಎಐಸಿಸಿ ಪತ್ರಿಕಾ ಪ್ರಕಟಣೆ ಆಧಾರದ ಮೇಲೆ ಒತ್ತಾಯ ಮಾಡುತ್ತಿದ್ದೇವೆ ಎಂಬ ವಾದದ ಬಗ್ಗೆ ಕೇಳಿದಾಗ, “ನನಗೆ ಇದ್ಯಾವುದರ ಬಗ್ಗೆ ಗೊತ್ತಿಲ್ಲ. ಈ ಎಲ್ಲಾ ವಿಚಾರವನ್ನು ದೆಹಲಿ ನಾಯಕರ ಜತೆ ಚರ್ಚೆ ಮಾಡಬೇಕು. ನಾನು ಈ ಹಿಂದೆ ಸಂಸದನಾಗಿದ್ದೆ. ಈಗ ಕೇವಲ ಪಕ್ಷದ ಕಾರ್ಯಕರ್ತ ಮಾತ್ರ. ಪಕ್ಷದ ವರಿಷ್ಠರ ಮಟ್ಟದಲ್ಲಿ ಏನು ಚರ್ಚೆಯಾಗುತ್ತದೆ ಎಂಬುದು ಗೊತ್ತಿಲ್ಲ. ನಾನು ಆಯ್ತು, ನನ್ನ ಕೆಲಸ ಆಯ್ತು ಎಂದು ಇದ್ದೇನೆ” ಎಂದು ತಿಳಿಸಿದರು.

ಚುನಾವಣೆಗೆ ನಿಲ್ಲುವ ಇರಾದೆ ನನ್ನದಲ್ಲ

ಕೆಎಂಎಫ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಜನ ನನಗೆ ವಿಶ್ರಾಂತಿ ನೀಡಿದ್ದಾರೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments