ಜನಪದ ಅಂದರೆ ಜನಪರ ಎಂದು ನಂಬಿರುವವನು ನಾನು. ಜಾನಪದ ಕಲೆಗಳು ಕೇವಲ ಮನೋರಂಜನೆಯ ಮಾಧ್ಯಮವಲ್ಲ; ಅವು ನಮ್ಮ ಮಣ್ಣಿನ ಗುಣ, ಇತಿಹಾಸ ಮತ್ತು ಬದುಕಿನ ಕ್ರಮವನ್ನು ಪ್ರತಿಬಿಂಬಿಸುವ ಕನ್ನಡಿಗಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.
ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಲೋಕದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿ ಜನಪದ ಲೋಕೋತ್ಸವ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ಜನಪದದಲ್ಲಿ ಜನ ವಿರೋಧಿಯಾದದ್ದು, ಸಮಾಜ ವಿರೋಧಿಯಾದದ್ದು ಏನೂ ಇಲ್ಲ ಆದ್ದರಿಂದಲೇ ಜನಪದ ಎಂದರೆ ಜನಪರ ಎನ್ನುತ್ತೇನೆ. ಇಂದು ಜಾನಪದ ಪರಿಷತ್, “ವಿದ್ಯಾರ್ಥಿ ಜಾನಪದ ಲೋಕೋತ್ಸವ” ಹಮ್ಮಿಕೊಂಡಿರುವುದು ವಿಶೇಷ. ಇಲ್ಲಿಯವರೆಗೂ ಜಾನಪದ ಅಂದ ಕೂಡಲೇ ಹಿರಿಯ ಕಲಾ ತಂಡಗಳು ಮತ್ತು ವಿಶ್ವ ವಿದ್ಯಾಲಯದ ವಿದ್ವಾಂಸರು ಮತ್ತು ಪಿಹೆಚ್ ಡಿ ವಿದ್ಯಾರ್ಥಿಗಳ ನಡುವೆ ಮಾತ್ರ ಒಂದಷ್ಟು ಚಟುವಟಿಕೆಗಳು ನಡೆಯುತ್ತಿದ್ದವು. ಈ ಬಾರಿ ವಿದ್ಯಾರ್ಥಿಗಳಿಗಾಗಿಯೇ, ವಿದ್ಯಾರ್ಥಿಗಳಿಂದಲೇ ನಡೆಯುವ ಜಾನಪದ ಲೋಕೋತ್ಸವ ಹಮ್ಮಿಕೊಂಡಿರುವುದು ಹಲವಾರು ಕಾರಣಗಳಿಂದ ಮಹತ್ವದ್ದಾಗಿದೆ” ಎಂದರು.
“ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಮುಂದಿನ ತಲೆ ಮಾರುಗಳಿಗೆ ದಾಟಿಸುವ ಮೂಲಕ ಈ ನೆಲದ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕೆಲಸ ವಿದ್ಯಾರ್ಥಿಗಳಿಂದಲೇ ಆಗಬೇಕಿದೆ. ಈ ನಿಟ್ಟಿನಲ್ಲಿ ಈ ಲೋಕೋತ್ಸವ ಮಹತ್ವದ್ದು. ಹೈಟೆಕ್ ಕಾನ್ವೆಂಟ್ ಗಳೂ ಶಾಲಾ ವಾರ್ಷಿಕೋತ್ಸವದ ದಿನಗಳಲ್ಲಿ ಪಾಶ್ಚಿಮಾತ್ಯ ಹಾಡು-ಕುಣಿತದ ಜೊತೆಗೆ ಈ ಮಣ್ಣಿನ ಜಾನಪದ ಹಾಡು-ನೃತ್ಯಗಳು ಸೇರಿದಂತೆ ಇತರೆ ಕಲಾ ಪ್ರಕಾರಗಳ ಪ್ರದರ್ಶನದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತಿದೆ. ಇದು ಜಾನಪದ ಕಲೆಗಳ ಶಕ್ತಿ ಮತ್ತು ಸತ್ವ. ಆಧುನಿಕ ತಂತ್ರಜ್ಞಾನ ಎಷ್ಟೇ ಬೆಳೆದರೂ, ಈ ಆಧುನಿಕ ತಂತ್ರಜ್ಞಾನದ ಮೂಲಕ ಪಾಶ್ಚಿಮಾತ್ಯ ಮಾತ್ರವಲ್ಲದೆ ಇತರೆ ಸಾಂಸ್ಕೃತಿಕ ದಾಳಿಗಳು ನಡೆದರೂ ನಮ್ಮ ಜಾನಪದ ಕಲೆಗಳನ್ನು ಅಳಿಸಲು ಸಾಧ್ಯವಾಗಿಲ್ಲ” ಎಂದು ಹೇಳಿದರು.
“ಹಳ್ಳಿಗಳ ಸೊಗಡು, ಶ್ರಮಜೀವಿಗಳ ನೋವು-ನಲಿವು ಈ ಕಲೆಗಳಲ್ಲಿ ಹಾಸುಹೊಕ್ಕಾಗಿವೆ. ಸಾಂಸ್ಕೃತಿಕ ಬೇರುಗಳ ರಕ್ಷಣೆಗೆ ಜಾನಪದ ಕಲೆಗಳು ಗಟ್ಟಿ ಅಡಿಪಾಯಗಳು. ನಮ್ಮ ಪೂರ್ವಜರ ಆಚಾರ-ವಿಚಾರಗಳು, ನಂಬಿಕೆಗಳು ಮತ್ತು ಜೀವನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಜಾನಪದ ಕಲೆಗಳು ಮಾಡುತ್ತವೆ. ಯಕ್ಷಗಾನ, ದೊಡ್ಡಾಟ ಅಥವಾ ಬಯಲಾಟಗಳು ಪುರಾಣ ಪುಣ್ಯಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತವೆ” ಎಂದು ವಿವರಿಸಿದರು.
“ಗಾದೆ ಮಾತುಗಳು, ಒಗಟುಗಳಲ್ಲಿರುವ ಭಾಷಾ ಪ್ರೌಢಿಮೆ ಅದ್ಭುತವಾದದ್ದು. ಜಾನಪದ ಎನ್ನುವುದು ಹರಿಯುವ ನದಿಯಂತೆ; ಅದು ಕಾಲಕ್ಕೆ ತಕ್ಕಂತೆ ಬದಲಾದರೂ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವುದಿಲ್ಲ. ನಮ್ಮ ನಾಡಿನ ಈ ಅಪ್ಪಟ ದೇಶಿ ಸೊಗಡನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಜ್ಞಾವಂತ ಜವಾಬ್ದಾರಿ ಆಗಿದೆ. ಈ ಜವಾಬ್ದಾರಿಯನ್ನು ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ, ಪ್ರತೀ ಕಲಾ ತಂಡಗಳೂ ಹೆಮ್ಮೆಯಿಂದ ನಿಭಾಯಿಸುತ್ತಾರೆ ಎನ್ನುವ ಭರವಸೆಯೊಂದಿಗೆ ನನಗಿದೆ” ಎಂದರು.
ಜಾನಪದ ಪರಿಷತ್ ಅಧ್ಯಕ್ಷರಾದ ಹಿ.ಚಿ.ಬೋರಲಿಂಗಯ್ಯ, ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳಾದ ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಶಾಸಕರಾದ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಕೆ.ರಾಜು, ಜಾನಪದ ಪರಿಷತ್ ನ ಆದಿತ್ಯ ನಂಜರಾಜು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.


