ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ನಗರದ ಲಾಡಗೇರಿಯ ಐದು ಜನ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ರುಪಾಪುರ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಬೀದರ್ ನಗರದ ಲಾಡಗೇರಿ ನಿವಾಸಿಗಳಾದ ಸುನೀತಾ (40), ಸಂತೋಷಕುಮಾರ್ (45) , ಲಕ್ಷ್ಮೀ (57), ನೀಲಮ್ಮ(62) ಹಾಗೂ ಕಲಾವತಿ ಮೃತರು ಎಂದು ಹೇಳಲಾಗುತ್ತಿದೆ.
ಬೀದರ್ನಿಂದ ಕ್ರೂಸರ್ ವಾಹನದಲ್ಲಿ ಫೆ.18ರಂದು ಒಟ್ಟು 14 ಜನ ಕುಂಭಮೇಳಕ್ಕೆ ತೆರಳಿದ್ದರು. ಫೆ.21 ರಂದು ವಾರಣಾಸಿ ಜಿಲ್ಲೆಯ ರುಪಾಪುರ ಸಮೀಪ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಾರಣಾಸಿ ಜಿಲ್ಲೆಯ ಮಿರ್ಜಾಮುರಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈಶ್ವರ ಖಂಡ್ರೆ ಸಂತಾಪ, ಐದು ಲಕ್ಷ ರೂ. ಪರಿಹಾರ
ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ತೆರಳಿದ್ದ ವೇಳೆ ಉತ್ತರ ಪ್ರದೇಶದ ರುಪಾಪೂರ ಬಳಿ ಬೀದರ್ ಜಿಲ್ಲೆಯ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಲಾಡಗೇರಿಯ 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮತ್ತು ಲಾರಿಯೊಂದರ ನಡುವೆ ಇಂದು ಬೆಳಗಿನ ಜಾವ ಡಿಕ್ಕಿಯಾಗಿ 6 ಜನರು ಮೃತಪಟ್ಟು, ಇತರ 8 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಆಘಾತವಾಯಿತು. ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಮೃತರ ಪಾರ್ಥವ ಶರೀರವನ್ನು ಬೀದರ್ ಗೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
“ಅಲ್ಲಿ ಕರ್ನಾಟಕದವರೇ ಆದ ಚನ್ನಪ್ಪ ಎಂಬ ಅಧಿಕಾರಿಯಿದ್ದು ಅವರೊಂದಿಗೆ ಮಾತನಾಡಿ, ಮೃತರ ಮತ್ತು ಗಾಯಾಳುಗಳ ಕುಟುಂಬಕ್ಕೆ ಸೂಕ್ತ ನೆರವು ದೊರಕಿಸಲು ತಿಳಿಸಿರುವೆ. ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ. ಮುಖ್ಯಮಂತ್ರಿಗಳು ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ” ಎಂದಿದ್ದಾರೆ.