Homeಕರ್ನಾಟಕಮೊದಲ ಬಾರಿಗೆ ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ: ಸಚಿವ ಶರಣಪ್ರಕಾಶ್ ಪಾಟೀಲ್

ಮೊದಲ ಬಾರಿಗೆ ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ: ಸಚಿವ ಶರಣಪ್ರಕಾಶ್ ಪಾಟೀಲ್

• ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಮೇಳ ಆಯೋಜನೆ
• ವಿಕಲಚೇತನರ ಸ್ವಾವಲಂಬನೆಗೆ ಸರ್ಕಾರದ ವಿನೂತನ ಹೆಜ್ಜೆ

ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಬಲೀಕರಣಗೊಳಿಸುವ ಉದ್ದೇಶದಿಂದ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿಕಲಚೇತನರಿಗಾಗಿಯೇ ವಿಶೇಷ ಉದ್ಯೋಗ ಮೇಳವನ್ನು ಮುಂದಿನ ಮೂರು ತಿಂಗಳೊಳಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಹಭಾಗಿತ್ವದಲ್ಲಿ ವಿಕಲಚೇತನರಿಗಾಗಿ ವಿಶೇಷವಾಗಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಇದು ರಾಜ್ಯ ಸರ್ಕಾರದ ವಿನೂತನ ಮತ್ತು ಮಹತ್ವದ ಕಾರ್ಯಕ್ರಮವಾಗಿದೆ” ಎಂದು ಹೇಳಿದರು.

“ವಿಕಲಚೇತನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಹಾಗೂ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ, ಮಾರುಕಟ್ಟೆ ಬೇಡಿಕೆಗೆ ಅನುಗುಣವಾದ ವೃತ್ತಿಪರ ತರಬೇತಿಯನ್ನು ರಾಜ್ಯದ ವಿಕಲಚೇತನರಿಗೆ ನೀಡಲಾಗುತ್ತಿದ್ದು, ಒಟ್ಟು 1,000 ಅಭ್ಯರ್ಥಿಗಳಿಗೆ 3 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯ ತರಬೇತಿ, ಟೂಲ್ ಕೀಟ್ ವಿತರಣೆ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ವಿವರಿಸಿದರು.

“ಇದಲ್ಲದೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ ಮೂಲಕ ವಿಕಲಚೇತನರಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಸರ್ಕಾರದ ಆದೇಶದಂತೆ ವಿಕಲಚೇತನರಿಗೆ ತರಬೇತಿಗಳಲ್ಲಿ ಇದ್ದ ಶೇ.3ರ ಮೀಸಲಾತಿಯನ್ನು ಶೇ.5ಕ್ಕೆ ಹೆಚ್ಚಿಸಲಾಗಿದೆ” ಎಂದು ತಿಳಿಸಿದರು.

“2017–18ರಿಂದ 2024–25ನೇ ಸಾಲಿನವರೆಗೆ ನೋಂದಣಿಯಾದ ಅಭ್ಯರ್ಥಿಗಳ ಪೈಕಿ 540 ವಿಕಲಚೇತನರು ವಿವಿಧ ಜಾಬ್ ರೋಲ್‌ಗಳಡಿ ವಿವಿಧ ತರಬೇತಿದಾರ ಸಂಸ್ಥೆಗಳ ಮೂಲಕ ತರಬೇತಿ ಪಡೆದಿದ್ದಾರೆ. ಇವರಲ್ಲಿ 83 ಜನರಿಗೆ ಉದ್ಯೋಗಾವಕಾಶ ದೊರೆತಿದೆ. ಮುಖ್ಯಮಂತ್ರಿ ಅವರ ‘ಕೌಶಲ್ಯ ಕರ್ನಾಟಕ’ ಯೋಜನೆಯಡಿ 10 ವಿಕಲಚೇತನರಿಗೆ ತರಬೇತಿ ನೀಡಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದರು.

“ಇತ್ತೀಚೆಗೆ ಬಿಎಂಎಸ್ ಕಾಲೇಜಿನಲ್ಲಿ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ 1,200 ಅಭ್ಯರ್ಥಿಗಳು ಭಾಗವಹಿಸಿದ್ದು, 75 ಜನರಿಗೆ ಉದ್ಯೋಗ ದೊರೆತಿದೆ” ಎಂದು ಅಂಕಿ-ಅಂಶಗಳೊಂದಿಗೆ ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments