ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಚಿತ್ರ ನಿರ್ದೇಶಕ ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ. ದೂರಿನನ್ವಯ ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಪತಿ ಪವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪ ಅಲ್ಲಗೆಳೆದ ಎಸ್ ನಾರಾಯಣ್
ಒಂದು ವರ್ಷದ ಹಿಂದೆ ಸೊಸೆ ಮನೆ ಬಿಟ್ಟು ಹೋಗಿದ್ದಾರೆ. ಈಗ ವರದಕ್ಷಿಣೆ ಕಿರುಕುಳ ಅಂತ ದೂರು ಕೊಟ್ಟಿದ್ದಾರೆ. ರೆಗ್ಯೂಲರ್ ಆಗಿ ನಮ್ಮ ದೇಶದಲ್ಲಿ ಎಲ್ಲ ಹೆಣ್ಮಕ್ಕಳು ಮಾಡೋದು ಅದೊಂದೇ ತಾನೆ ಎಂದ ನಿರ್ದೇಶಕ ಎಸ್. ನಾರಾಯಣ್ ಹಗುರವಾಗಿ ಮಾತನಾಡಿದ್ದಾರೆ.
ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ನಾರಾಯಣ್, “ಪವಿತ್ರಾ ಮನೆ ಬಿಟ್ಟು ಹೋಗಿ 14 ತಿಂಗಳಾಗಿವೆ. ಮದುವೆ ಆಗಿ ಒಂದು ತಿಂಗಳು ಮಾತುಕತೆ ಸಹ ಇರಲಿಲ್ಲ. ಮನೆ ಬಿಟ್ಟು ಹೋದ ಕೂಡಲೇ ಹೋಗಿ ಕಂಪ್ಲೆಂಟ್ ಕೊಡಬಹುದಿತ್ತಲ್ಲ. ಯಾಕೆ ಇಷ್ಟು ತಡ ಮಾಡಿದ್ದು, ವರದಕ್ಷಿಣೆ ಪಿಡುಗು ತೊಲಗಬೇಕು ಎಂದು ಸಿನಿಮಾ ಮಾಡಿದವನು ನಾನು, ಆದರೆ ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ವರದಕ್ಷಿಣೆ ಕೇಸು ಎನ್ನುವುದನ್ನು ಕೆಲ ಮಹಿಳೆಯರು ಅಸ್ತ್ರವಾಗಿ ಬಳಸುತ್ತಿದ್ದಾರೆ” ಎಂದಿದ್ದಾರೆ.